ನಗುವೆಂಬುದು.. ಅನುರಾಧ ಸಾಮಗ ಅವರ ಅಂಕಣ ಬರಹ

ಮತ್ತೊಂದು ದಿನ ಬಂತು.

ಅಲ್ಲೇ, ಅದೇ ಅವಳು, ಮತ್ತವಳ ಜುಳುಜುಳು ಹರಿವು, ಪ್ರಶಾಂತ ತೀರ, ಅರಳಿದ ಕಮಲಗಳ ಶಿಶುಸಮಾನ ಮುಗ್ಧ ಚಂದ, ಹಂಸಗಳ ಧೀರ ಗಂಭೀರ ನಡೆ, ಮೀನುಗಳೆದ್ದೆದ್ದೆದ್ದು ಹಾರಿ ಬಿದ್ದಾಗಿನ ಸದ್ದು -ಪುಳುಕ್ಕ್.. 

ಅದೇ ತುಂಬುಗಾಂಭೀರ್ಯ. ಒಂದು ದಿನವೂ ಬದಲಾಗದಂತೆ ಕಾಯ್ದುಕೊಳುವ ಇವಳ ತೂಕದ ನಡೆ ಆ ಹೆಣ್ಣಿಗೊಂದು ಪ್ರಶ್ನೆ,

“ಹೆಣ್ಣಲ್ಲವೇನೇ ನೀನು, ಮನಕೆ ಅತಿರೇಕದ ಏರಿಳಿತಗಳು ಸಹಜವಲ್ಲವೇನೇ, ಅನುದಿನ ಎಲ್ಲಿ ಮುಚ್ಚಿಟ್ಟೀಯೇ ಸಖೀ?! “

ಅದೇ ತಾನೇ ಮೇಲೇರಿ ಬಂದವನ ಯುವಕಿರಣಗಳ ಜೊತೆ ಕಣ್ಣಾಮುಚ್ಚಾಲೆ ಆಡುವ ಕಪ್ಪು ಕಳಚಿ ನಸುಗೆಂಪುಟ್ಟಿರುವ ಇವಳೊಬ್ಬಳು ಸದಾಯುವತಿ. ಮುದಗೊಳಿಸುವ ಚೆಲುವು..  ದೇಗುಲದ ಮುಂಜಾವಿನಾಗಮನ ಸಾರುವ ಘಂಟೆದನಿ, ಮೆಲುಮಂತ್ರಘೋಷ, ಹಿಮ್ಮೇಳದಲಿ ಹಕ್ಕಿಕಲರವಗಳ ಜೊತೆ ಕಣ್ಣುಕಿವಿಗಳಿಗೆ ಮಾಸದ ಹೊಸಭರವಸೆಯ ಆಶ್ವಾಸನೆಯ ಬೆಳಕನ್ನು ತಂದು ಪ್ರತಿನಸುಕೂ ಮುಂದಿಡುವ ಇವಳೊಡಲ ಸಮೃದ್ಧಿಯೂ ಆ ಹೆಣ್ಣಿಗೊಂದು ಸೋಜಿಗ, “ಪ್ರತಿದಿನವೂ ಇಷ್ಟೊಂದು ಹೊಸತನವೆಲ್ಲಿಂದ ಒಟ್ಟುಗೂಡಿಸಿ ತಂದೀಯೇ ಗೆಳತಿ!?”

ದಿನದಿನವೂ ತೀರದಲಿ ಇಷ್ಟಗಲ ಹರಡಿದ ಮರದಡಿ ಬುಡಕೊರಗಿ ಕಾಲು ಮಡಿಚಿ ಎದೆಗಾನಿಸಿ, ಕೈಯ್ಯೆರಡು ಕಾಲಸುತ್ತ ಬೆಸೆದು, ತಲೆ ಕಾಂಡಕಾನಿಸಿ ಬಿಟ್ಟ ಕಣ್ಣೆರಡರ ದೃಷ್ಟಿ ಎಷ್ಟು ದೂರ ಸಾಧ್ಯವೋ ಅಷ್ಟು ದೂರಕೆ ಹಾಯಿಸಿರುವ, ಮೊದಲೇ ಸುಂದರಿ, ಗಮನವಿಟ್ಟು ಸಿಂಗರಿಸಿಕೊಂಡಳೆಂದರೆ, ಅದೂ ಪ್ರೀತಿಯ ಮಧುರಾನುಭೂತಿ ಮೈಮನವೆಲ್ಲಾ ತನ್ನ ಛಾಪೊತ್ತಿದ್ದು, ಅದು ಅವಳ ಛವಿಯಾಗಿ ಹೊಮ್ಮುತ್ತಿದ್ದಾಗ ಶಬ್ದಗಳಿಗೆ ಸ್ವಲ್ಪವಾದರೂ ಸಿಗದಿರುವ ಹೆಣ್ಣಿನ ಅಂದ ಆ ವಾತಾವರಣದ ಮೊಗಕೆ ಹಣೆಬೊಟ್ಟಂತಿತ್ತು. ಮುಖದಲೇನೋ ನೆನೆಸಿಕೊಂಡು ಅರಳುವ ನಸುನಗು ಸದಾ ಹಾಗೇ ನಳನಳಿಸುವ ಪರಿ ಅವರಿಬ್ಬರಿಗೂ ಒಗಟು,

“ನಿರೀಕ್ಷೆ ಪ್ರತಿಬಾರಿ ನಿರಾಸೆಯಾಗುವಾಗಲೂ ಅದನ್ನು ನಗುವಾಗಿಸುವ ಸತ್ವವೆಂಥಹುದೇ ಗೆಳತಿ?!”

ನಸುನಗುತ್ತಾರೆ ಪರಸ್ಪರರ ಪ್ರಶ್ನೆಗಳಿಗೆ ಮೂವರೂ..

ಅಲ್ಲಿನ ವೈಶಿಷ್ಠ್ಯವಿನ್ನೆಂಥ ಕುಂಬಳಕಾಯಿಯೂ ಅಲ್ಲ. ತಾನು ಹೆಣ್ಣೆಂಬುವ ಸತ್ಯವೇ ಆ ಸತ್ವದ ಹಿಂದಿನ ಗುಟ್ಟೆಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ..

ಆದರಿಂದು ಸ್ವಲ್ಪ ಪರಸ್ಪರರಿಗೆ ತಮ್ಮತಮ್ಮ ಹೆಣ್ತನದ ಸಂದರ್ಭಾನುಸಾರ ನಿಲುವುಗಳು ಮತ್ತಲ್ಲಿನ ಗರಿಮೆ, ಹೆಮ್ಮೆಗಳನ್ನು ವಿವರಿಸಬೇಕೆನಿಸಿತು.

ಹರಿಯುವವಳನ್ನುತ್ತಾಳೆ,

“ನಾ ನದಿ,

ಹರಿವೇ ನನ್ನ ಗುರುತು

ಗಾಂಭೀರ್ಯ ಹೊದ್ದೇ ಹರಿದು

ಬರೇ ಮಂಜುಳಗಾನ ಹಾಡಿ

ಸ್ಪರ್ಶಿಸುವರ ಮುದಗೊಳಿಸಿ

ತೇಲಬಯಸುವರ ತೇಲಿಸಿ,

ಮೀರಿ ತಳಕಿಳಿವವರ ಮುಳುಗಿಸಿ

ತೊಳೆದೆಲ್ಲ ಮಡಿಮಾಡಿ

ಮನೆಮಾಡಿದವರ ಪೊರೆದು

ಮುಟ್ಟಿ ತೆರಳುವರಿಗೆ ಉಡಿತುಂಬ ನೆನಪಿತ್ತು…

ಹೀಗೇ ಪೂರಕವಾಗಿರುವುದೆನ್ನ ವಿಧಿ

ಗಾಂಭೀರ್ಯದಡಿಯ ಚಂಚಲತೆ,

ಉಕ್ಕಿ ಹರಿವ ಅಬ್ಬರದ ನಗು

ಒಡಲಾಳದ ಕೊರೆವ ಶೈತ್ಯ

ಬಿಡದೆ ಎಲ್ಲ ಒಳಗೆಳೆವ ಚಕ್ರಸುಳಿ

ತಳದ ಕೊಚ್ಚೆಯೆಬ್ಬಿಸಿ ಮೇಲ್ತಂದು

ಬಳಿಸಾರುವೆಲ್ಲರ ಉಬ್ಬಿಉಕ್ಕಿ

ಮುತ್ತಿಕ್ಕುವ ರೂಪ ನೋಡಿದರೆ

ಉಳಿದೀತೇ ಜಗ, ಭರಿಸೀತೇ ವೇಗ?!”

ಕಿಸಕ್ಕನೆ ನಗುತ್ತಾರೆ ಮೂವರೂ…

ಬೆಳಕಮೂಟೆ ಹೊತ್ತು ತರುವವಳೆನುತಾಳೆ,

“ನಾನು ತಾಯಿ

ಹೊತ್ತು ಹೆತ್ತು ಪೊರೆವುದೆನ್ನ ದಾರಿ

ಪ್ರತಿಕೂಸಿಗೂ ಅದೇ ಪ್ರೀತಿ

ಅದೇ ಮಮತೆ, ಅದೇ ಗಮನ,

ಅದೇ ಮುನಿಸು, ಅದೇ ತಿನಿಸು

ಅದೇ ಸಿಟ್ಟು, ಅದೇ ಪೆಟ್ಟು

ಪ್ರತಿಗಳಿಗೆಯೂ ಅದೇ ರೂಪ

ಅದೇ ಶಕ್ತಿ, ಅದೇ ತಾಳ್ಮೆ

ಅದೇ ದೃಢತೆ, ಅದೇ ಪ್ರೇಮದೊರತೆ

ಉಣಿಸಿ ಕುಡಿಸಿ ಬೆಳೆಸುವುದೆನ್ನ ಗುರಿ.

ದಿನದಿನವೂ ಅದೇ ಮತ್ತದೇ

ಹೊರಹೊಮ್ಮಿಸುವಾಗ,

ಬೇರೇನೂ ಭಾವವೊಸರದಿರುವಾಗ,

ಒಳಗಲ್ಲಿ ಏಕತಾನತೆ

ಕಾಡದಿರುವಂತೆ,

ನಾ ನನಗೇ ಬೇಜಾರೆನಿಸದಂತೆ

ಹೊಸಹೊಸ ಮನಸುಡುತೇನೆ

ಹೊಸತೆನಿಸುತೇನೆ.”

ನೇವರಿಸಿ ಅವಳ ತಲೆ, ಕೈ ಕಣ್ಣಿಗೊತ್ತಿಕೊಂಡು ಉಳಿದಿಬ್ಬರು ಜೊತೆಗವಳೂ ಸೇರಿ ಮೆಲುನಗುತಾರೆ.

ದಾರಿಯೊಂದಕೆ ದೃಷ್ಟಿ ಹಾಸಿಯೇ ದಿನಕಳೆವವಳೆನುತಾಳೆ.

“ನಾನು ಪ್ರೇಮಿ,

ಬಾಳ ಬಂಡವಾಳ ಬರೀ ಅದುಣಿಸಿದ ಸವಿ.

ನಿನ್ನೆಗಳ ನೆನೆನೆನೆದು

ನಾಳೆಗಳ ಚಿತ್ರ ಬರೆದು

ಬಯಕೆಬಣ್ಣ ತುಂಬಿ,

ಆ ನವಿಲಗರಿಯ ಕಚಗುಳಿ,

ತೋಳದಿಂಬಾಗಿಸಿ ಕಣ್ಮುಚ್ಚಿ

ಪಿಸುನುಡಿದ ಹಾಡು,

ಅವನ ಕೊಳಲಗಾನ

ಹುಚ್ಚೆದ್ದು ನರ್ತಿಸಿದ ಮನ

ಮತ್ತದಕೆ ಲಯವಿತ್ತು ಮೈ,

ಮೌನ ಸಾರಿದ

ಪ್ರೇಮದ ಮಹೋನ್ನತ ಸಂದೇಶ

ಮತ್ತವನು ದೂರವಾಗುವ ಗಳಿಗೆ

ಮೀರಿ ಹರಿವ ಕಣ್ಣಿಗವ ಕಟ್ಟಿದ

ಮುತ್ತಿನ ಅಣೆಕಟ್ಟು.

ಈ ಮೆಲುಕುಗಳೇ ಕೈಯ್ಯೊಳಗಿನ ನಿಧಿ..

ಅವನ ಸಾಕ್ಷಾತ್ಕಾರದಾಸೆಯಲಿ

ಕಾಯುತಾ ಭರವಸೆ,

ನಂಬಿಕೆ, ವಿಶ್ವಾಸವನೇ ಉಸಿರಾಡುತ್ತೇನೆ.

ಅವನಿರದ ಇಂದಿನೆಲ್ಲ ಕ್ಷಣಗಳನು

ಅವನಿರಬಹುದಾದ ಕ್ಷಣಗಳ

ನಾಳೆಗಳಿಂದ ಎರವಲು

ಪಡೆದು ತುಂಬುತ್ತೇನೆ.

ಸವಿಯುತ್ತಾ ಆ ಕ್ಷಣಗಳ

ಅವನ ಸರಸದಾಟಗಳಿಗೆ

ನಾಚುತ್ತೇನೆ, ನಲಿಯುತ್ತೇನೆ,

ಸವಿಯುಂಡು ಮತ್ತೆಮತ್ತೆ ನಗುವಾಗುತ್ತೇನೆ..”

ಈ ಬಾರಿ ನಗಲಾಗಲಿಲ್ಲ ಉಳಿದಿಬ್ಬರಿಗೆ..

ಕಾಯುವಿಕೆಯ ತಪವಾಗಿಸಿ ಬಸವಳಿಯುತಿರುವ ಹಸಿರು ಬಾಳೊಂದು ಬಾಡುವುದರಲ್ಲೂ ಸಾರ್ಥಕತೆ ಕಾಣುತ್ತಿರುವುದು ನಗುವ ಹುಟ್ಟಿಸಲಾರದಾಯಿತು

ಆದರೆ ಅವಳು ಮುಗುಳ್ನಗುತ್ತಲೇ ಇದ್ದಳು.

ಅವರಿಬ್ಬರ ಮುಖದಲ್ಲಿ ಕಾಣದ ತನ್ನ ಪ್ರತಿಫಲನಕೆ ಅವಳ ನಗು ಮಂಕಾಗತೊಡಗಿತು. ಅವರಿಬ್ಬರೂ ಎಚ್ಚೆತ್ತರು.

“ನಗುವೊಂದು ಬಾಳು ಬೆಳಗುವ ದೀಪ,

ಅವ ಬರುವ ಹಾದಿಗೆ ನೀ ಹಚ್ಚಿಡಬೇಕಾದ ದೀಪ,

ಅವನ ನೇರ‍ ನಿನ್ನೆಡೆಗೇ ಕರೆತರಬಲ್ಲ ಮಾರ್ಗದರ್ಶಿ ದೀಪ,

ಆರಗೊಡಬಾರದು.

ಇಗೋ ನಾವೇ ಎರೆಯುತ್ತೇವೆ ಸ್ನೇಹದ ಎಣ್ಣೆ,

ಒದಗಿಸುತ್ತೇವೆ ಪ್ರೀತಿಯ ಬತ್ತಿ.

ನಮ್ಮ ಒತ್ತಾಸೆಯ ಅಂಜಲಿಯೊಡ್ಡಿ ಹತಾಶೆಯ ಗಾಳಿಯ

ಬಳಿಸಾರಗೊಡದೆ ಪೊರೆಯುತ್ತೇವೆ ನಿನ್ನ ನಗುವ.. “

ಎಂದರು, ಮತ್ತೆ ಹಣೆಗೊಂದು ಹೂ ಮುತ್ತಿತ್ತು ಕಣ್ತುಂಬಿ ನಕ್ಕರು.

 

 

+3

Leave a Reply

Your email address will not be published. Required fields are marked *

error: Content is protected !!