ಮೂಲಬಿಂಬವೊಂದು ಹೀಗೆ..

 

ಅಕ್ಕಪಕ್ಕದ ಊರಿನವರಾದ ಅವರಿಬ್ಬರು ಭೇಟಿಯಾದದ್ದು ಒಂದು ಸಾಂಸ್ಕೃತಿಕ ಉತ್ಸವದಲ್ಲಿ. ಸಮಾನಾಸಕ್ತಿ ಮತ್ತು
ಯಾವುದೋ ಒಂದು ಋಣದ ಬಂಧ ಆ ಒಂದೆರಡು ದಿನಗಳಲ್ಲಿ ಹೇಗೆ ಬೆಸೆಯಿತೆಂದರೆ, ಮುಂದೆ ದಶಕಗಳ ತನಕ
ಅವರ ನಡುವೆ ಗೆಳೆತನವೊಂದು ಹಚ್ಚಹಸಿರಾಗಿ ಉಳಕೊಂಡಿತ್ತು. ಅಮೃತವಾಹಿನಿಯೊಂದು ಎದೆಯಿಂದೆದೆಗೆ ಎಂಬ
ಕವಿವಾಣಿಯಂತೆ ಮಾತು-ಮೌನಗಳ ಹಂಗಿಲ್ಲದೆ ಅವರ ನಡುವೆ ನಿರಂತರ ಭಾವಸಂಪರ್ಕವಿರುತಿತ್ತು. ಮುನಿಸು,
ಕೋಪ, ಜಗಳ ಮತ್ತು ಮತ್ತೆ ಅವೆಲ್ಲ ಇರಲೇ ಇಲ್ಲವೆಂಬಂತೆ ಅವರ ಒಂದಾಗುವಿಕೆ, ನೋಡುವವರಿಗೆ ಸ್ವಲ್ಪ
ಅತಿರೇಕವೆನಿಸುವಷ್ಟು ತೀವ್ರವಿದ್ದರೂ ಆ ಗೆಳೆತನದ ತಾಜಾತನ ತಾಕಿ ಮುದ ನೀಡುತ್ತಿದ್ದದ್ದೂ ಸುಳ್ಳಲ್ಲ. ಹೀಗೆ
ಗೆಳೆತನದ ಸುವಿಶಾಲ ನೆರಳಲ್ಲಿ ನೆಮ್ಮದಿಯಾಗಿದ್ದವರು ಈ ಕಾರಣಕ್ಕಾಗಿ ಹಲವರ ಅಭಿಮಾನದ ದೃಷ್ಟಿಗೆ
ಪಾತ್ರರಾಗಿದ್ದರೆ ಇನ್ನು ಕೆಲವರು ಅಸೂಯೆ ಪಟ್ಟದ್ದೂ ಉಂಟು!
ಅವರಿಬ್ಬರೂ ಒಂದು ಕಥಾಸ್ಪರ್ಧೆಯಲ್ಲಿ ಭಾಗವಹಿಸುತ್ತಾರೆ, ಇಬ್ಬರಿಗೂ ಬಹುಮಾನ ಬರುವುದಿಲ್ಲ. ಎಂದಿನಂತೆ ತಾವು
ಬರೆದ ಕಥೆಯನ್ನು ಪರಸ್ಪರ ಹಂಚಿಕೊಂಡಿರುತ್ತಾರೆ. ಓದುತ್ತಾರೆ, ಎಂದಿನಂತೆ ಮೆಚ್ಚುಗೆಯೋ, ಸಲಹೆಸೂಚನೆಯೋ
ಕಥೆಯ ಬಗೆಗಿನ ತಮ್ಮ ಅಭಿಪ್ರಾಯಗಳನ್ನು ಪರಸ್ಪರ ಎಗ್ಗಿಲ್ಲದೆ ಹಂಚಿಕೊಳ್ಳುತ್ತಾರೆ. ಅಲ್ಲಿಗೆ ಅದು ಮುಗಿಯಿತೆಂದು
ಸುಮ್ಮನಾಗಿರುತ್ತಾರೆ. ಆ ಸ್ಪರ್ಧೆಯ ತೀರ್ಪುಗಾರರೊಬ್ಬರು ಇಬ್ಬರಲ್ಲೊಬ್ಬರನ್ನು ಮುಂದೊಮ್ಮೆ ಭೇಟಿಯಾಗುತ್ತಾರೆ,


ನಿನ್ನ ಕಥೆ ಆ ನಿನ್ನ ಸ್ನೇಹಿತರು ಬರೆದ ಕಥೆಗಿಂತ ಎಷ್ಟೋ ಮೇಲಾಗಿತ್ತು, ಆ ಕಥೆ ಒಂದು ವರದಿಯಂತಿತ್ತು, ಅದರಲ್ಲಿ
ಕಥೆಯ ಆತ್ಮವಿರಲೇ ಇಲ್ಲ ಅನ್ನುತ್ತಾರೆ. ಈ ವಿಷಯ ಎಂದಿನಂತೆ ಯಾವ ಮುಚ್ಚುಮರೆಯೂ ಇಲ್ಲದೆ ಅವರಿಬ್ಬರ ನಡುವೆ
ವಿನಿಮಯವಾಗುತ್ತದೆ. ಅಲ್ಲಿಯವರೆಗೆ ಅವರಿಬ್ಬರ ನಡುವೆ ಇದ್ದಿರದೇ ಇದ್ದ ಸ್ಪರ್ಧೆಯ ಮನೋಭಾವವೊಂದು ಈ
ಬಿಂದುವಿನಲ್ಲಿ ಅವರಿಗರಿವಿಲ್ಲದ ಹಾಗೆ ಬಿತ್ತಲ್ಪಡುತ್ತದೆ. ಅಲ್ಲಿಂದ ಶುರುವಾದ ಕಲಬೆರಕೆ, ಸಣ್ಣಸಣ್ಣ ತಪ್ಪು ಹೆಜ್ಜೆಗಳ
ಮೂಲಕ ಸಾಗಿಬಂದು ಅವರಿಬ್ಬರ ನಡುವಿನ ಸೊಗಸನ್ನು ಒಂದು ನೋವಿನ ಸ್ರೋತವನ್ನಾಗಿಸಿದೆ. ಇಬ್ಬರನ್ನು ಒಂದು
ದೊಡ್ಡ, ಬಲಿಷ್ಠ ಗೋಡೆಯ ಅಕ್ಕಪಕ್ಕ ತಂದು ನಿಲ್ಲಿಸಿದೆ. ಇಂದು ಅವರ ನಡುವೆ ಮಾತಿಲ್ಲ, ಮಾತಿನ ಪರಿಮಳದಲ್ಲಿ
ಅರಳುತ್ತಿದ್ದ ಮೌನವೂ ಇಲ್ಲ. ತೊಳಲಾಡುವ ಭಾವಗಳು ಹುಟ್ಟಿಹುಟ್ಟಿ ತಮ್ಮದೇ ಭಾರಕ್ಕೆ ಅಲ್ಲಲ್ಲೆ ಕುಸಿದು ಬೀಳುವಾಗ
ಇಬ್ಬರೊಳಗೂ ಬಹಳ ದೊಡ್ಡ ಸದ್ದಾಗುತ್ತದೆ ಮತ್ತು ಅದರ ತೀವ್ರತೆಗೆ ಇಬ್ಬರೂ ಬೆಚ್ಚಿಬೀಳುತ್ತಾರೆ. ಕ್ಷಣಕ್ಷಣ ಪರಸ್ಪರರ
ಯೋಚನೆಗಳು ಅವರಿಬ್ಬರೊಳಗಿನ ಶಾಂತಿಯನ್ನು ಕಬಳಿಸಲು ಬರುತ್ತವೆ, ಶಾಂತಿಯನ್ನು ಕಾಪಾಡಿಕೊಳ್ಳುವ
ಪ್ರಯತ್ನದಲ್ಲಿ ಸಲ್ಲದ್ದನ್ನೆಲ್ಲ ಮಾಡಿಯೂ ವಿಫಲರಾಗುತ್ತಾರೆ.


ಯಾವತ್ತೋ ಒಮ್ಮೆ ಈ ಫೋನಲ್ಲಿ ಅತೀವ ತುಡಿತದ ಭಾರವನ್ನು ಹೊತ್ತು ಸಂದೇಶವೊಂದು ಬರುತ್ತದೆ
“ಆರಾಮಿದ್ದೀಯಾ ತಾನೇ?” ಇತ್ತಲಿಂದ “ಹೌದು” ಅನ್ನುವ ಅತಿ ಹಗುರ ಉತ್ತರವೊಂದು ಬೋಳುಬೋಳಾಗಿ ಅಲ್ಲಿಗೆ
ತಲುಪುತ್ತದೆ ಮತ್ತು ಅಲ್ಲಿನ ಶೂನ್ಯಕಳೆಯನ್ನು ಇನ್ನಷ್ಟು ಗಾಢವಾಗಿಸುತ್ತದೆ. ಇನ್ನೊಮ್ಮೆ , “ಏ ನಿನ್ನೆ ಕನಸಲ್ಲಿ ಬಂದಿದ್ದೆ
ನೀನು! ಎಷ್ಟು ಖುಷಿಯಾಯಿತು ಗೊತ್ತಾ? ” ಅಂತ ಭಾವತೀವ್ರತೆಯ ಸಂದೇಶವೊಂದು ಅಲ್ಲಿಗೆ ಹೋಗುತ್ತದೆ. ಅಲ್ಲಿಂದ
“ಹಾಗೇ ಖುಷಿಯಾಗಿರು, ಬದುಕು ಅಷ್ಟುಮಾತ್ರ ಅವಕಾಶವನ್ನು ಎಲ್ಲರಿಗೂ ಕೊಟ್ಟಿರುತ್ತದೆ” ಅನ್ನುವ ತಣ್ಣೀರೆರಚುವ
ಉತ್ತರವೊಂದು ತೆವಳುತ್ತ ಬರುತ್ತದೆ ಮತ್ತು ಇಲ್ಲಿನ ಲಹರಿಯ ತಲೆಯ ಮೇಲೊಂದು ಮೊಟಕಿ ಸುಮ್ಮನಾಗಿಸುತ್ತದೆ.

ತಮ್ಮತಮ್ಮ ಮನೆಗಳಲ್ಲಿ ಎಲ್ಲ ಸುಖ ಸಮೃದ್ಧಿಗಳ ನಡುವೆಯೂ ಮಂಕಾಗಿ ಕೂರುವ ಆ ಇಬ್ಬರು ಅವರವರ ಸ್ವಂತದ
ಜನರಿಗೆ ಒಗಟಿನಂತೆ ಕಾಣುತ್ತಾರೆ. “ಸುಖ ಕೊಡದ ಸ್ನೇಹವಿದ್ದರೆಷ್ಟು ಬಿಟ್ಟರೆಷ್ಟು ಅನ್ನುತ್ತಾರೆ. ಅಲ್ಲಿ ಅದು ಅನಪೇಕ್ಷಿತ
ಅಂತ ಗೊತ್ತಾದ ಮೇಲೂ ನಿನ್ನ ಗಮನವನ್ನ ಯಾಕೆ ಅತ್ತ ಹರಿಯಗೊಡುತ್ತೀಯಾ” ಅನ್ನುತ್ತಾರೆ. “ಬಿಟ್ಟುಬಿಡು,
ಉಳಿಸಿಕೊಳ್ಳಬೇಕೆಂಬ ದರ್ದು ಅಲ್ಲಿಲ್ಲದ್ದು ನಿನಗೇಕೆ, ನಿನಗಿಲ್ಲಿ ನಾವಿಲ್ಲವೇನು?” ಅನ್ನುತ್ತಾರೆ. ಆದರೆ ಅವರಿಬ್ಬರಿಗೂ
ಗೊತ್ತು ಅಲ್ಲಿ ಈಗ ಸದ್ಯಕ್ಕೆ ಎಲ್ಲಕ್ಕಿಂತ ಹೆಚ್ಚು ಅಪೇಕ್ಷಿತ ತಮ್ಮ ಪರಸ್ಪರರ ಗಮನವೇ ಹೌದು ಮತ್ತು ಅದು ಎಂದಿಗೂ
ಹಾಗೇ ಇರಲಿರುವುದು. ಹಾಗಾಗಿ ಮತ್ತೊಮ್ಮೆ ಅತ್ತಲಿಗೆ ಸಂದೇಶ ಕಳುಹಿಸದೇ ಇರಲಾಗದಷ್ಟು ತಾವು
ನಿರುಪಾಯರಾಗುವ ಸಂದರ್ಭಕ್ಕಾಗಿ ಕಾಯುತ್ತಾರೆ. ಪರಸ್ಪರರನ್ನು ನೆನೆಯಬಾರದು ಅನ್ನುವ ತಮ್ಮದೇ ಮನಸಿನ
ಆಣತಿಯಡಿಯಲ್ಲೇ, ಅದಕ್ಕೆ ವಿರುದ್ಧವಾಗಿ ಪರಸ್ಪರರ ಮುಖ ಹೊತ್ತಿರುವ ಅಂಕದ ಪರದೆ ಹಚ್ಚಿ ಅದರ ಮುಂದೆಯೇ
ಅನುದಿನದ ಜೀವನ ನಾಟಕ ನಡೆಸುತ್ತಾರೆ.


. ಎಷ್ಟೋಬಾರಿ ನಮ್ಮ ನಡುವೆ ಯಾವತ್ತೂ ಇದು ಬದಲಾಗದು ಅಂತನಿಸುವಷ್ಟು ಗಾಢವಿರುವ ಬಂಧಗಳಲ್ಲೂ
ಪರಸ್ಪರರೊಳಗೆ ಸ್ಪರ್ಧೆ ಹುಟ್ಟುಹಾಕುವ ಒಂದು ಸಣ್ಣ ಸಂದರ್ಭ ಬಂದರೆ ಸಾಕು. ಬಣ್ಣವೆಲ್ಲವನ್ನೂ ಒಂದು ತೊಟ್ಟು
ಮಸಿ ನುಂಗಿತು ಅನ್ನುವ ಹಾಗೆ ಅದು ಸಂಬಂಧವನ್ನು ಹಾಳುಗೆಡವಬಲ್ಲುದು. ಅಷ್ಟು ಆಪ್ತತೆಯಿದ್ದೂ ಇಂಥದ್ದೊಂದು
ಕಲಬೆರಕೆಯನ್ನು ಯಾಕೆ ತಡೆಯಲಾಗುವುದಿಲ್ಲ?
ಮನುಷ್ಯ ಸ್ವಭಾವತಃ ಸ್ವಕೇಂದ್ರಿತ ಚಿಂತನೆಯುಳ್ಳವನು. ಪ್ರೀತಿ, ಸ್ನೇಹ ಅಂತನ್ನುವ ಸೊಗಸಿನೊಳಗೆ ಇರುವಾಗ
“ನಾನಿಲ್ಲ, ಇನ್ನು ಬರಿ ನೀನೇ..” ಅಂತ ಅನಿಸೀತಾದರೂ, ವಾಸ್ತವದಲ್ಲಿ ತನ್ನೊಳಗಿನ ತನ್ನ ಸಾಫಲ್ಯವೆಂಬ, ತನ್ನ
ಬದುಕಿನ ಸಾರ್ಥಕ್ಯವೆಂಬ ದಾಹ ಪೂರೈಕೆಗೆ ಈ ಸಂಬಂಧ ಅಡ್ಡಿಯಾಗದೇ ಇರುವವರೆಗೆ ಮಾತ್ರ ಇದು ಸತ್ಯವಾದ
ಮಾತಾಗಿರುತ್ತದೆ. ಇಂಥದ್ದೊಂದು ಕಲಬೆರಕೆ ಭಾವಪ್ರಪಂಚದಲ್ಲಿ ಕಾಣಿಸಿಕೊಂಡ ಕ್ಷಣವೇ ಒಳಗಿನ ಅಹಂ ಮತ್ತು
ಆತ್ಮಗೌರವ ಇವೆರಡರ ನಡುವಿರುವ ಅತ್ಯಂತ ತೆಳು ಅಂತರ ನಶಿಸಿಹೋಗುತ್ತದೆ ಮತ್ತು ಅಹಂ ತಾನು
ತಣಿಯಲೇಬೇಕೆಂಬ ತುಡಿತದಲ್ಲಿ “ಹೋಗಲಿಬಿಡು” ಅನ್ನುವ ಭಾವವನ್ನು ನಾಶಮಾಡಿಹಾಕುತ್ತದೆ.
ಆದರೆ, ಎಷ್ಟೋಬಾರಿ
“ನೀನಂದುಕೊಂಡದ್ದೇ ಸರಿ ಇರಬಹುದು, ಅದನ್ನಿಲ್ಲೇ ಬಿಟ್ಟು ಬೆಸೆದ ಕೈ ಬಿಡಿಸಿಕೊಳ್ಳದಂತೆ ಇನ್ನೂ ಭದ್ರ ಹಿಡಿದು
ಮುಂದೆ ಹೋಗುವಾ”
ಅಂತ ಈ ಒದ್ದಾಟವನ್ನು ನಿವಾರಿಸಿಕೊಳ್ಳುವುದೋ,
ಅಥವಾ
“ಸರಿಬಿಡು, ಇಷ್ಟೊಂದು ಪರಸ್ಪರರ ಮೇಲೆ ದೂರುದುಮ್ಮಾನವಿದ್ದುಕೊಂಡು ಹರಕೆ ಸಲ್ಲಿಸುವ ರೀತಿಯಲ್ಲಿ
ಒಬ್ಬರಿನ್ನೊಬ್ಬರಿಗೆ ಅನಗತ್ಯವೋ, ಅನಿವಾರ್ಯವೋ ಎಂಬಂತೆ ಜೊತೆಗಿರುವುದು ಬೇಡ, ದೂರಾಗಿಯೇಬಿಡುವಾ”
ಅಂತ ದೂರಾಗುವುದೋ ಸಾಧ್ಯವಾಗುವುದಿಲ್ಲ.
ಯಾಕಿರಬಹುದು?

ಭಾವವನ್ನು ಕಟ್ಟಿಹಾಕುವುದಾಗಲಿ, ಸೀಮಿತಗೊಳಿಸುವುದಾಗಲಿ, ಅಲ್ಲಿಷ್ಟು, ಇಲ್ಲಿಷ್ಟು ಕೆತ್ತಿ ಮನಮೋಹಿಸುವಂತೆ ಅಥವಾ
ಮನಸಿಗೆ ಸಮಾಧಾನವಾಗುವಂತೆ ಮೂರ್ತೀಕರಿಸುವುದಾಗಲಿ ಸಾಧ್ಯವಿಲ್ಲದ ಮಾತು. ಭಾವವೊಮ್ಮೆ ಒಸರಿದರೆ
ಮುಗಿಯಿತು, ಮುಂದೆಷ್ಟೋ ಮಜಲುಗಳನ್ನು ಹಾದುಹೋಗಬೇಕಾಗಿ ಬಂದರೂ ಅದರ ಮೂಲಬಿಂಬ ಭಿನ್ನವಾಗುವುದಿಲ್ಲ.
ಕಾಲಕ್ಕೆ ತಕ್ಕ ಕೋಲವೆಂಬಂತೆ ಕೆಲ ರೆಕ್ಕೆ ಪುಕ್ಕಗಳನ್ನು ಹಚ್ಚಿಕೊಂಡಿದೆಯೇನೋ ಅನಿಸುವುದುಂಟು. ಆದರೆ
ಮೂಲಸ್ವರೂಪದ ಸತ್ತ್ವತೀವ್ರತೆ ಹಿಂದೆ ಅಲ್ಲೊಂದು ಬಿಂದುವಿನಲ್ಲಿ ಭದ್ರವಾಗಿ ಹಾಗೇ ಉಳಕೊಂಡಿರುತ್ತದೆ.
ಬದುಕುತ್ತಾ ಸಾಗುವ ದಾರಿಯಲ್ಲಿ ಮುಖಾಮುಖಿಯಾಗುವ ವ್ಯಕ್ತಿತ್ವಗಳು ನಮ್ಮ ಅರಿವಿನೊಳಗೆ ಹೆಜ್ಜೆಯಿಕ್ಕಿದಾಗ
ಗೊತ್ತಿಲ್ಲದೇ ಅವರೆಡೆಗೆ ಅನಿಯಂತ್ರಿತ, ಅನಿರೀಕ್ಷಿತ ಮತ್ತೆ ಕೆಲವೊಮ್ಮೆ ಅನಪೇಕ್ಷಿತವೂ ಹೌದು, ಅಂಥ ಭಾವನೆ
ಹುಟ್ಟುತ್ತದೆ. ಸಂಪರ್ಕವುಳಿದರೆ, ಮುಂದೆ ಆ ಅಪರಿಚಯಗಳು ಹಿತಕರವಾದದ್ದೋ ಅಥವಾ ಅದಲ್ಲದ್ದೋ ಒಂದು
ಸಂಬಂಧದಲ್ಲಿ ನಮ್ಮೊಂದಿಗೆ ಬೆಸೆದುಕೊಳ್ಳಲು ಕಾರಣವಾಗುತ್ತದೆ. ಸಂಬಂಧ ಹುಟ್ಟಲು ಈ ಭಾವನೆ ಕಾರಣವಾದರೂ ಆ
ಭಾವನೆ ಹುಟ್ಟಲು ಕಾರಣವೊಂದಿರಲೇಬೇಕೆಂಬುದೇನೂ ಇಲ್ಲ. ಆದರೆ ಬೆರಳು ಬೆಸೆದು ನಡೆವ ಹಾದಿಯಲ್ಲಿ
ಮುಂದೆಲ್ಲೋ ಆ ಬಂಧವು ವಿರೂಪಗೊಂಡಿತಾದರೆ ಅದಕ್ಕೆ ಕಾರಣವಿರುತ್ತದೆ, ಇದ್ದೇ ಇರುತ್ತದೆ ಮತ್ತು
ಬಲವಾದದ್ದಿರುತ್ತದೆ. ಆ ಹೊತ್ತು ಒಂದಿಷ್ಟೂ ಬದಲಾಗದೇ ಉಳಿದುಕೊಂಡಿರುವ ಸಂಬಂಧ ಹುಟ್ಟಲು ಕಾರಣವಾದ
ವಿಶಿಷ್ಠ ಭಾವವೊಂದು ಈ ಬದಲಾದ ಸಂದರ್ಭದ ಹಿನ್ನೆಲೆಯಲ್ಲಿ ಇನ್ನಿಲ್ಲದಂತೆ ಒದ್ದಾಡುತ್ತಿರುತ್ತದೆ.
ಯಾಕೆಂದರೆ ಋಣದ ಒದ್ದೆ ನೆಲದ ಮೇಲೊಮ್ಮೆ ಒಸರಿ ಅಚ್ಚೊತ್ತಿದ ಭಾವ ಮತ್ತೆಂದಿಗೂ ವಿಕಾರಗೊಳ್ಳದು,
ವಿರೂಪಗೊಳ್ಳದು. “ರೂಪಾಂತರವಾಯಿತು, ಈಗ ನಿನಗಾಗಿನ ನನ್ನ ಭಾವ ಬೇರೆಯಾಯಿತು” ಅಂತನ್ನುವ ಹೊರಗಣ್ಣು,
ಮೂಲರೂಪವನ್ನಷ್ಟೇ ಕಾಣುವ ಒಳಗಣ್ಣಿನೆದುರು ವಾಸ್ತವದಲ್ಲಿ ಯಾವತ್ತೂ ವಿವಶವಾಗಿ ನಿಂತಿರುತ್ತದೆ.
ಈ ಒದ್ದಾಟ ಎಲ್ಲರೆದುರೂ ಬಂದಿದ್ದೀತು, ಕಾಡಿದ್ದೀತು, ಮುಂದೆಲ್ಲೋ ಒಮ್ಮೆ ವಿರಳವೂ ಆದೀತು. ನನ್ನನ್ನೂ ಕಾಡಿದ್ದಿದೆ.
ಆಗೆಲ್ಲ ಆ ವ್ಯಕ್ತಿಯ ಜೊತೆ ಕಳೆದ ಚಂದದ ಗಳಿಗೆಗಳನ್ನೊಮ್ಮೆ ನೆನೆಸಿಕೊಂಡರೆ, ಅವುಗಳೊಳಗೆ ಚಲಿಸುತ್ತಾ
ಮತ್ತೊಮ್ಮೆ ಅವರನ್ನು ಭಾವನಾತ್ಮಕವಾಗಿ ಸಮೀಪಿಸಿದರೆ, ಈ ನಾಕುದಿನದ ಬದುಕಿನಲ್ಲಿ ಎಲ್ಲ ಸಂತೋಷಗಳ ಜೊತೆ
ನೀನೂ ಬೇಕು ನನಗೆ ಅನ್ನುವ ಧನಾತ್ಮಕ ಸಂದೇಶವೊಂದನ್ನು ಅವರತ್ತ ಕಳುಹಿಸುತ್ತಿದ್ದರೆ ಬಹುಶಃ ಅವರ ಬಗೆಗೆ
ಒಂದಿಷ್ಟೂ ಬದಲಾಗದೇ ನಮ್ಮೊಳಗೆ ಉಳಿದಿರುವ ಆ ಮೂಲಭಾವ ಅವರನ್ನು ತಲುಪಿ ಅವರೊಳಗಿನ ಆ ಭಾವವನ್ನೂ
ಉದ್ದೀಪಿಸೀತೇನೋ ಅಂತ ಯೋಚಿಸುತ್ತೇನೆ.
ಅದರ ಬೆನ್ನಾರೆಯೇ “ಇಲ್ಲ, ನಾನಿನ್ನು ಅಂಥದ್ದೊಂದಕ್ಕೆ ಕಾಯುವುದಿಲ್ಲ” ಅಂತನ್ನುತ್ತಲೇ, ಅಂಥದ್ದೊಂದು ಸಂಭವಿಸಲಿ
ಎಂದು ಹೀಗೆ ಕಾಯುತ್ತೇನೆ.

ನೋಡಬೇಕು ನಾನೂ
ನಾವು ನೆಟ್ಟ ಬೆಳಕಿನ ಮರ ಕತ್ತಲೆದುರು ಶರಣಾಗಿ ಉರುಳುವುದನ್ನು

ಇಕೋ ಕೊಡಲಿ
ನೀ ಬಯಸಿ ಪಡೆದ ಬಿಡುಗಡೆಯ ಬಳುವಳಿ
ನೋಡಬೇಕು
ಬಯಸಿ, ಕಲ್ಪಿಸಿ, ಕಾದು, ಕುದಿದು ಕೊರಗಿ ದೂರವೆಂಬ ಮಾತಿಗೆ,
ಕೊನೆಗೊಮ್ಮೆ ಕಣ್ಣಲಿ ನೆರೆಯುಕ್ಕಿದಾಗ
ಸುಖದ ಕಿಡಿ ಚಿಮ್ಮಿ ಮುಗಿಲೆತ್ತರ
ಲೆಕ್ಕವಿರದಷ್ಟು ಮಿನುಗುಗಳಾಗಿ
ಅದೋ ಕತ್ತಲು ನಗುತಿದೆಯೆನಿಸಿದ್ದು
ಮರುಕ್ಷಣ ನಶಿಸುವ ಮಿಂಚುಹುಳದ ಮಿನುಗೆನಿಸುವುದನ್ನು..

ಕಣ್ಣಬೊಂಬೆಯ ಜೀವವಾದೊಂದು ಹೆಸರು
ಎದೆಭಿತ್ತಿಯಿಂದಳಿಸಿಹೋಗುವುದನ್ನು
ನೋಡಬೇಕು ನಾನೂ..
ಎದುರುನೋಡುವ ಸಂಜೆಗಳು
ಕಾಲ್ಸಪ್ಪಳದ ಲಹರಿ ಹರಿದುಕೊಳುವುದನ್ನು
ನನ್ನ ಭಾವದೊಳಗೆ ನಿನ್ನ ಶಬ್ದಗಳನು
ನಿನ್ನ ಪದಗಳೊಳಗೆ ನನ್ನ ಜೀವವನು
ತಂದಿರಿಸುವ ಸೇತು,
ಇದೋ ತೆಗೆದುಕೋ ಕತ್ತರಿ
ನೀನೇ ಕೇಳಿ ಪಡಕೊಂಡ ವಿದಾಯದ ತುತ್ತೂರಿ
ಹರಿದುಬಿಡೊಂದು ತಂತು;
ನೋಡಬೇಕು ನಾನೂ
ನದಿಯು ಕಡಲಿಂದ ಬೇರ್ಪಡುವುದನ್ನು

ನಿನ್ನೆಗಳು ಒಳಗಿಲ್ಲಿ ಭದ್ರವಿವೆ
ಮುಚ್ಚಿದ ಸಂದೂಕದೊಳಗಿಂದಿಣುಕಿ,
ತಾಕಿ, ತಡವಿ
ಬಿಟ್ಟರೆ ಮೆಲ್ಲ ಮುತ್ತಿಕ್ಕಿ ಮತ್ತೊಳಮರಳುತ್ತಾವೆ.
ತಾಜಾವೇನಾದರೂ ಹುಟ್ಟೀತೆಂದು
ಇಲ್ಲ, ನಾನು ಕಾಯುವುದಿಲ್ಲ..
ನಿನ್ನ ನೆನೆದರೆ ನಾನಿಲ್ಲಿ,
ಅಲ್ಲಿ ನನ್ನ ಹೆಸರಿನ ಬಿಕ್ಕಳಿಕೆಯೊಂದು
ನಿನ್ನಂಗಳದ ಶಿಶಿರಕೆ ಅಕಾಲ ವಸಂತವ ಮೆತ್ತೀತು!

ನಿನ್ನ ಗುಳಿಕೆನ್ನೆಯ ಮಾತಿನ ಮನೆಗಿಂತಲೂ
ನಿರ್ಭಾವ ಬೆನ್ನು ಚಂದೆನಿಸಿದೆ
ಪ್ರೀತಿಯಲೆ ಮುನ್ನಿಗಿಂತಲೀಗ ಉಕ್ಕಿಬಂದಿದೆ,
ಏನು ಮಾಡಲಿ ಹೇಳದನು..
ಇದೋ ಸುಮ್ಮನೆ ತೂರಿಬಿಟ್ಟಿರುವೆ
ಕಾಣದ ಗಾಳಿ ನಿನಗೆ ಕೇಳದ ಹಾಗೆ
ಮತ್ತೊಮ್ಮೆ
ನಿನ್ನ ನಿರಾಕರಣೆಯ ತರುವ ಮಾತಿತ್ತು ಹೊರಟಿದೆ…
ನೋಡಬೇಕು ನಾನು
ಎಲ್ಲದರ ಕೊನೆಗೆ
ಪ್ರೀತಿಯೆಂಬ ಗಾಯವೊಂದು
ಹಿತವಾಗಿ ಅರಳುವುದ ನನ್ನೊಳಗೆ…
 
ಅನುರಾಧ ಪಿ ಸಾಮಗ
 

 

+3

Leave a Reply

Your email address will not be published. Required fields are marked *

error: Content is protected !!