ಇಷ್ಟೊಂದು ಹತ್ತಿರವಾಗಿ ಕಣ್ಣಲಿ ಅವಿತು ಮುತ್ತಿನ ಹನಿಯಾಗಿ ಜಾರಿದ್ದು ಧುಮ್ಮಿಕ್ಕುವ ಜಲಪಾತದಂತೆ. ಬಿಕ್ಕಿಸಿದಂತೆಲ್ಲ ಅಡ್ಡಿಯಾದ ತಡೆಗೋಡೆಗಳು ನೋವಿನ ಅಲೆಯಲ್ಲಿ ಒಂದರ ಹಿಂದೆ ಒಂದರಂತೆ ಜಾರುತಿವೆ. ಯಾಕಿಷ್ಟು ತಳಮಳ ಗೊತ್ತಿಲ್ಲ,ಹೃದಯದಲ್ಲೊಂದು ಕಸಿವಿಸಿ,ಯಾತನೆಗೂ ಬಿಗುಮಾನ. ಹೇಳಿದ್ರೆ ನಗೆಪಾಟಲಾದಿತೆಂಬ ಭಯಕೆ, ಮುಸುಕು ಧರಿಸಿದರು ಅಳತೆ ಮೀರಿದ ಸೆಳೆತ ಅಂತರಾಳಕ್ಕೆ ಎಳೆಯುತ್ತಿರುವುದಕ್ಕೆ ಅಂತ್ಯ ಹಾಡದಿದ್ದರೆ ಎಲ್ಲಿ ಭೂಗತವಾಗುವೆನೋ ಎಂಬ ಅನುಮಾನ. ಧ್ವನಿಯ ಮಾಧುರ್ಯದ ತಂಪು ತನುವಿಗೆ ಸಾಂತ್ವಾನ ಸಾರಿದಾಗ ನಾನಿನ್ನು ಉಸಿರಾಡುತ್ತಿರುವೆನೆಂಬುದು ಖಾತ್ರಿಯಾಯಿತು ಕಣೋ.ನನ್ನೊಳಗಿನ ಅಸಾಮಾನ್ಯ ತರಂಗಗಳಿಗೆ ಜೀವ ತುಂಬಿದವ. ಕುರುಹುಗಳು ಮಾಯಾ ಜಾಲ ಬೀಸಿದಂತೆಲ್ಲ ನಾನೊಂದು ಕ್ಷಣ ಕಂಗಾಲಾಗಿದ್ದಂತು ಸತ್ಯ.ಏನಾತೆಂಬ ಚಿಂತೆ!ಯಾಕಾತೆಂಬ ಕಂತೆ! ಅಂತೆಕಂತೆಗಳ ನಡುವೆ ಏನೆಲ್ಲ ಅನಾಹುತಗಳು ಸಂಭವಿಸಲು ಸಾಧ್ಯ ಈ ಬದುಕಿಗೆ ಹೇಳು.
ಯಾವ ಯೋಗ ನನ್ನ ಪಾಲಿಗೆ ಒಲಿದಿಹುದೋ ಕಾಣೆ.
ನಾಚಿಕೆಗಳು,ಒಳಸೆಳೆತಗಳು ಒಮ್ಮೊಮ್ಮೆ ನೂಕು ನುಗ್ಗಲು ನಡುವೆ ಏರ್ಪಡುವ ಮನಸ್ತಾಪಗಳು ಎಲ್ಲವು ಹರಿವ ಝರಿಯ ಜಾಡ ನರಸುವ ಬೇರಿನಂತೆ.ಅವು ಆಳಕ್ಕಿಳಿದು ಬೆವರಿದಂತೆಲ್ಲ;ಯಾವುದು ಅಸಾಧ್ಯವೋ ಯಾವುದು ಲಭ್ಯವೋ ನಾನರಿಯೇ.ಪ್ರತಿ ಕುಸುಮ ಅರಳುವುದು ಭಗವಂತನ ಮುಡಿಸೇರಲೆಂದು.ಪ್ರಕೃತಿ ಸೌಂದರ್ಯ ಆಗಾಗ ರಂಗೇರುವುದುಂಟು.ಆ ರಂಗೀಗೆ ಗುಂಗಾಗಿ ನಿನ್ನ ನೆನಪಾಗಿ ಮಂಕಾದ ಮನಕೆ ನಿರಾಶೆ ಬಿಟ್ಟು ಬೇರೆನು ಲಭಿಸದು;ಒಣಮರಕೆ ನೀರು ಗೊಬ್ಬರ ಹಾಕಿ ಬೆಳೆಸಲು ವ್ಯರ್ಥ ಪ್ರಯತ್ನ ಮಾಡಿದಷ್ಟು ಸಮಯ ಹಾಳೆಂಬ ಅರಿವು ತಿವಿದು ಎಚ್ಚರಿಸಿದೆ.
ಈಗೀನ ಕಾಲಘಟ್ಟಕ್ಕೂ ಸಾಧ್ಯವಾ? ನಾನೆ ನಾನಾಗಿರದೆ ಬರೀ ಆಗಸದಲ್ಲಿ ಹಾರುವ ಹಕ್ಕಿಯ ಪುಕ್ಕ ಲೆಕ್ಕ ಮಾಡುವ ಅಕ್ಕಸಾಲಿಗನಾ?ಕೈಗೆ ಸಿಗದ ಎಲ್ಲ ವಸ್ತುವು ಮನಮೋಹಕವೆನಿಸಿ ಬಿಟ್ಟಿದೆ.ಗಡಿಯಾರದ ಸದ್ದಿಗೆ ಗರಬಡಿದವಳಂತೆ ಎದ್ದು ಕುಂತೆ;ಎದುರಿಗೆ ಬರಿ ಕತ್ತಲು. ಬಿರುಸಾಗಿ ಬಿಸಿ ಬೆರೆತ ತಂಗಾಳಿ. ಕೊಂಚವು ಹೆದರದೆ ಎನ್ನೆದೆಗೆ ತಂಪೆರೆಚಲು ಅಡರುತ್ತಿತ್ತು.ಅದಕೂ ಅಗಮ್ಯ ಸಲಿಗೆಯ ಸುಲಿಗೆ. ಒಂಟಿತನದ ಗೀಳಿಗೆ ಸಂಚಾರಿ ಒಡ್ಡೋಲಗ.ಹಿತವೆಂಬ ಮರಿಚೀಕೆಯು ಬಯಲು ಸೀಮೆಯಲಿ ಪೊದೆಯಾಗಿ ಬೆಳೆದು ಜಾಲಿಮರದಂತೆ ಹಬ್ಬಿದ ಒಂಟಿ ಮುಳ್ಳುಗಳ ಜಾಲವದು.ಸುಮ್ಮನೆ ಹರಿಹಾಯ್ದವನಿಗೆ ಪರಚಿದ ಗೀರುಗಳ ಸರಮಾಲೆಗೆ, ಹಾ…ಹಾ…ಎಂದು ಹಿಡಿ ಶಾಪ ಹಾಕುತ ಮುಂದೆ ಸಾಗುವವರ ದೃಷ್ಟಿ ಕೆಂಡಾಮಂಡಲವೆ.
ಅಷ್ಟೇ ತಾನೆ ಅವನ ಭಾವ.ಚುಚ್ಚಿದ ಮುಳ್ಳಿನ ವ್ಯಥೆಯ ಅರ್ಥವಿಸಲು ಹೆಣಗಾಡುವಲ್ಲಿ ಅಪರಾಧಿ ಪ್ರಜ್ಞೆ ನನಗೆ. ನೋವು,ನಲಿವು,ಸಂಕಟ,ವಿಮೋಚನೆಯ ಪರಿತಪಿಸಿ ಬೆನ್ನುಹತ್ತಲು ಆಗದ ತೀರಕೆ ದೋಣಿ ನಿಲ್ಲಿಸಿ ಅಂವಗೆ ನಿಸ್ಸಂದೇಹವಾಗಿ ಅರಸುತ್ತಿರುವೆ. ದಿಟವಾಗಿಯು ದೋಣಿ ನಡೆಸುವ ಅಂಬಿಗನ ಅವಶ್ಯಕತೆ ಇದೆ. ಕಾಲಕ್ರಮೇಣ ಎಲ್ಲವೂ ನಿಂತ ನೀರಾಗಿ ಹೋದರೆಂಬ ಭಯ! ಈಗೀಗ ಕಾಡಾಟ ಯಾರಿಗಾಗಿ ಯಾರೆಂಬ ಜಿಜ್ಞಾಸೆ! ಪಡುವಣದಲಿ ಅಸ್ತಂಗತನಾಗುವ ರವಿಯ ಹೊಂಗಿರಣಕೆ ಹಳದಿ ಕೆಂಪಾಗಿ ಬಾನತುಂಬ ರಂಗು ಚಲ್ಲಿದಾಗ ಬೆಸ್ತರು ರಾಶಿರಾಶಿ ಭೂತಾಯಿಯ ದಡ ಸೇರಿಸುವಲ್ಲಿ ಸುಸ್ತಾಗಿದ್ದನ್ನು ಕಂಡು ಪರಮಾಶ್ಚರ್ಯ.
ಕನಸಕಾಣಲು ನಗದು ಪಾವತಿಸಬೇಕಿಲ್ಲ; ಮುಸ್ಸಂಜೆ ಮಾತುಗಳು ಮನದೊಳಗಿಂದ ಎದುರಾಗಿ ತಂಪೆರೆವ ತಂಗಾಳಿಗೆ ಮೈಯೊಡ್ಡಿದಂತೆ ಪಿಸುಮಾತೊಂದು ನನಗರಿವಿಲ್ಲದೆ ಮುಖಪುಟದೆದುರು ಪಟಪಟವೆಂದು ವರದಿ ಒಪ್ಪಿಸಿದಂತೆ ಭಾಸವಾಗುತ್ತಿತ್ತು. ಕೇಳೊರಾರಿಲ್ಲ ದಿದ್ದರೂ ಇರುವನೆಂಬ ಭ್ರಮೆಯಲಿ ತೇಲಿದ್ದಂತು ಅಲ್ಲಗಳೆಯಲು ಆಗದು.ಉಸಿರಾಡಲು ನಿನ್ನುಸಿರು ಸಾಕು.ಅಕ್ಕಪಕ್ಕದಲ್ಲಿರುವವರೆಲ್ಲ ಆಡಿಕೊಂಡು ನಕ್ಕಿದ್ದುಂಟು.ಕೈಕಾಲು,ಅಂದ,ಚೆಂದ ಇದ್ದವರಿಗೇನೆ ಜೋಡಿ ಸರಿಯಾಗಿ ಸಿಗದಿರುವಾಗ,ಕೈಗಳಿಲ್ಲದ ಊನ ಮನದವಳು ನೋಡುಗರ ಕಣ್ಣಿಗೆ. ಪಾಪವೆಂಬ ಅನುಕಂಪ. ಕೈ ಹಿಡಿದು ನಡೆಸಲು ಮುಂದಾಗುವವರು ಯಾರಿದ್ದಾರೆ? ಕನಸಲ್ಲಾದರೂ ರಾಜಕುಮಾರ ಧರೆಗೆ ಇಳಿಯಬಾರದೆ ಎಂಬ ನಿರೀಕ್ಷೆ ತಪ್ಪಲ್ಲ.
ಅಭೂತಪೂರ್ವ ಸಮ್ಮಿಲನವೇ ಇರಬೇಕು.ಆಗಸ್ದಿಂದ ಧರೆಗಿಳಿವ ಶ್ವೇತವರ್ಣದ ಹಯಗಳ ಚಿತ್ರಕಲೆಗೆ ಬೆಲೆ ಕಟ್ಟಲಾದಿತೆ?ಅದರ ಬೆಲೆಗೊಂದು ನೆಲೆ ನೀಡಿದವನ ಕಲಾಕುಂಚದೊಂದಿಗೆ ಎದುರಾಗಿ ಕಣ್ಣಲಿ ಕಣ್ಣಿಟ್ಟು ನಿನ್ನ ಮುಂಗೈಯಾಗಿ ಜೀವನ ಪೂರ್ತಿ ಜೊತೆಯಾಗಲೆಂದು ಆಸೆ ಪಟ್ಟಿರುವೆ ಒಲಿದು ಬರುವೆಯಾ ನನ್ನೆದೆಗೆಂದಾಗ ಎಲ್ಲವೂ ಮರೆತು ಹೋದ ಗಳಿಗೆ ನೀಲ್ಯಾಕಾಶ ಶುಭ್ರವಾಗಿ ಕಂಗೊಳಿಸುತ್ತ ರತ್ನಗಂಬಳಿ ಹಾಸಿತ್ತು..ದಾರಿ ಸುಗಮವಾಗಿದೆ. ಜಾದು ಮ್ಯಾಟ್ ನಲ್ಲಿ ಭೂಮಂಡಲ ಸುತ್ತಿಸಿಬರುವೆನೆಂಬ ಭರವಸೆಗಳ ಮಹಾಪೂರವೇ ಹರಿದುಬಂದಂತಾಗಿ ವಾಸ್ತವಕೆ ಬಂದಿದ್ದೆ.ಹಲೋ…. ಯಾವ ಲೋಕಕೆ ಹೋಗಿದ್ದಿ ಕುಳ್ಳಿ ನಾನೆತ್ತಿದರೆ ತಾನೆ ಬಾನೆತ್ತರಕೆ ಕೈ ಚಾಚಲು ಸಾಧ್ಯವೆನ್ನುತ್ತ ಆಲಿಂಗನದಲ್ಲಿ ಮೈಮರೆವ ಕ್ಷಣಕೆ ತಾರೆಗಳು ಮಿನುಗಿ ನಾವಿದ್ದಿವಿ… ಇನ್ನು ನಕ್ಕಂತಾಗಿ ಕಷ್ಟಗಳು ಕ್ಷಣಿಕ ಸಂತೈಸುವವರು ಬಳಿಯಿರುವಾಗ ಎಂಬಂತಿತ್ತು.ಬದುಕು ನಾ ಪಡೆದಷ್ಟು ದಕ್ಕಿತೆಂದು ನಿಟ್ಟುಸಿರು ಬಿಟ್ಟೆ.
Bogasevalgina Akasha ..Akashadaste arthapurnavagide..very beautiful
Aahaaaa ತುಂಬಾ sooooooooper ಕಣ್ರೀ ಒಂದೊಂದು ಶಬ್ದ ವೂ ಮನವನ್ನು ಸೆಳೆಯುತ್ತದೆ.ಓದಲು ಎಷ್ಟೊಂದು ಖುಷಿ ಕೊಡುತ್ತದೆ ಎಂಬುದು ಬರೆಯಲಾಗದು.ತಮ್ಮ ಉನ್ನತ ಸಾಹಿತ್ಯ ಕೃಷಿ ಗೆ ಶರಣು 🙏🏻🙏🏻🌷🙏🏻🌷 ಅಭಿನಂದನೆಗಳು
ಸೂಪರ್ ಮೇಡಂ
“ಕನಸು ಕಾಣಲು ನಗದು ಪಾವತಿಸಬೇಕಿಲ್ಲ”
ಇವರ ಲೇಖನ ಓದಲು ಮನ ಬೇಸರಿಸೊಲ್ಲ
ಎಲ್ಲವೂ ಎಲ್ಲರಿಂದ ಆಗದು,ಬರೆಯಲಾಗದು
ಓದುಗನ ಮನಸ್ಸೆ ಬದಲಾಗುವುದು
ಆ ಬರಹದ ಶೈಲಿ,ಪದಗಳ ಜೋಡಣೆ, ಶಿರ್ಷಿಕೆ ಗಮನಿಸಿದಾಗ ಹತ್ತಾರು ಬಾರಿ ಓದಿದರೂ ಇನ್ನೂ ಇನ್ನೂ ಓದಬೇಕೆನಿಸುವಂತಹ ಲೇಖನಗಳು ಹೀಗೆಯೇ ಮೂಡಿಬರಲಿ ನಿಮ್ಮ ಬರಹಗಳು ಶುಭವಾಗಲಿ.
ಕಣ್ಣೀರಿಗೂ ಮಾತು ಕಲಿಸಿದಿರಿ….ಮನಸ್ಸು ಖುಷಿಯಾಗಿದೆ…