ಕ್ಯಾಲೆಂಡರ್ ಬದಲಾಗಿದೆ…. ಶಿವಲೀಲಾ ಹುಣಸಗಿಯವರ ಬರಹ

ವರುಷವೂರುಳಿತೆಂದು ಯಾರೋ ಪಿಸುಗುಟ್ಟುವ ಸದ್ದು ಹೇಳಿದ್ದಂತೂ ಹೌದು ಕ್ಯಾಲೆಂಡರ ಬದಲಾಗಿದೆ. ನಾನು ಲೆಕ್ಕಹಾಕಿಟ್ಟ ಹನ್ನೆರಡು ತಿಂಗಳುಗಳು.ಪುಟ ತಿರುವಿದಂತೆಲ್ಲ ದಿನದಂಕಿಗಳು ಹಗಲು ರಾತ್ರಿಗಳ ಸಮ್ಮಿಳನದಿಂದ ಎಲ್ಲವನ್ನು ಗಾಳಿಯಲ್ಲಿ ತೇಲಿಸಿ ಬಿಟ್ಟಿವೆ.ನನಗೂ ಈ ಹವಾಮಾನಕ್ಕೂ ಏನೋ ಅವಿನಾಭಾವ ನಂಟಿದೆ.ಬಿಸಿಲನ್ನು ತಡಕೊಳ್ಳಲಾರದ್ದು, ಚಳಿಯನ್ನು ನುಂಗಲಾರದೇ ಮರಗಟ್ಟಿದ ನರಗಳು, ಮಳೆಯ ಅಬ್ಬರವ ನನ್ನೊಳಗೆ ಇಂಗಿಸಿಕೊಳ್ಳಲಾರದೇ ಒದ್ದಾಡುವ ಅರ್ಥ ಹೀನ ಕ್ಷಾಮದ ಮೈತ್ರಿಯಾದಂತೆಲ್ಲ ಚೌಗು ಪ್ರದೇಶದಲ್ಲಿ ಚಿಗುರು ಕಾಣಲು ಹಪಹಪಿಸುವ ಜಿಗುಟಾದ ಭಾವಗಳು.ಅತ್ತ ಮೂರ್ತಕೂ ಬಾರದ,ಇತ್ತ ಪೂಜೆಗೂ ದಕ್ಕದ ಭಗ್ನ ರೂಪ. ದಿನಕ್ಕೊಂದು ವೇಷ ಕಟ್ಟಿ ಸಾಕಾಗಿ ಹೋಗಿದೆ. ಬರಸಿಡಿಲಿಗೂ ಭರವಸೆ ಮೂಡಿಸದೇ ಬರಿದಾದ ಆಗಸದಲ್ಲಿ ನಕ್ಷತ್ರಗಳ ಪೈಕಿ ಒಂದು ಚೂರುಕಾಗಿಲ್ಲ. ಎಲ್ಲವೂ ಸಾಮೂಹಿಕ ಮೌನ ತಳೆದಂತಾಗಿತ್ತು.

ನೀರವ ಸ್ತಬ್ಧ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಭಾರಿ ಯಶಸ್ಸು ಕಂಡಂತಾಗಿ, ಎಲ್ಲೆಂದರಲ್ಲಿ ಬಹುಪರಾಕ ಬಿಟ್ಟರೆ ಮಾರನೇ ದಿನ ಗ್ರೆಗೋರಿಯನ್ ಕ್ಯಾಲೆಂಡರ್ ಪ್ರಕಾರ ಎಲ್ಲ ಕಂಡ ಕನಸು ನನಸೆಂಬ ಹುಚ್ಚು ಹೊಳೆ ಹರಿಸಿದ್ದಂತೆಲ್ಲ, ಯುವ ಮನಸ್ಸು ಮೃತ ಸಮುದ್ರದಲ್ಲಿ ವಾಸಿಸುವ ಪ್ರಯತ್ನ ಮಾಡಿದಂಗಾಗಿತ್ತು. ಹಗಲು ಕನಸು ಕಾಣುತ್ತಿತ್ತು.ಸಾಗರವ ತೋಳ ಬಂಧನದಲ್ಲಿ ಬಿಗಿದಪ್ಪ ಬಯಸುವ ನನ್ನ ಅಣಕಿಸಲೆಂದೆ ಕಾದು ಕುಂತ ಕುಹಕ ಬಿಂಬಗಳಿಗೆ ಪ್ರತಿಫಲಿಸುವ ಗೋಜಿಗೆ ಹೋಗದಂತೆ ಕಡಿವಾಣದ ಸರಳುಗಳು ಅಮೂರ್ತ ರೂಪದಲ್ಲಿ ಹೊಸೆದಿದ್ದವು.

ಅದಕ್ಕೆ ಇರಬೇಕು….ಮೊನ್ನೆ ಸುದ್ದಿಯಾದ ವರದಿಯು ಹೊಸದಾಗದಿದ್ದರೂ,ಹೊಸದೆಂಬಂತೆ ಪ್ರಕಟಿಸಿದ್ದನ್ನು ಕಂಡು ಕಾಣದಂತೆ ‘ಹೌದಾ’ ಎಂದು ಆಶ್ಚರ್ಯ ಪಟ್ಟಿದ್ದೆ. ಅವರಿಗೂ ಅನ್ನಿಸಿರಬೇಕು ನಂಬಿದಳೆಂದು.ಎಲ್ಲೋ ಮರೆತು ಹೋದ,ಅಲ್ಲ ಹುದಿಗಿದ ನಗ್ನ ಸತ್ಯದ ಚಿತ್ರಣದ ತುಣುಕೊಂದು ಪ್ರಖರತೆಯ ಆರ್ಭಟಕೆ ಒಡೆದ ಕನ್ನಡಿ ಆಶ್ರಯ ಬಯಸಿತ್ತು.ಕನ್ನಡಿಯ ಒಡಕಿನ ಚೂರೊಳಗೆ ಸಾವಿರ ಬಿಂಬಗಳು ಕಣ್ಣೆದುರು ನಲಿಯುತ್ತಿತ್ತು. ಮುಖ ಸಪ್ಪೆಯಾಗಿತ್ತು‌ ಇದು ನಾನಾ ಎಂಬ ಅನುಮಾನ.ಸತ್ಯ ಅಸತ್ಯಗಳ ನಡುವೆ ಒಂದು ಸಣ್ಣ ಪರದೆಯ ಅಡ್ಡಕೆ ತೆರೆಯೆಳೆಯುವುದೊಂದೆ ಬಾಕಿ.ಈಗ್ಯಾಕೆ ಇದೆಲ್ಲ? ಪ್ರಶ್ನಿಸುವ ಹಕ್ಕಿಲ್ಲ ತೆಪ್ಪಗಿರಬೇಕು ಅಂದಾಗ ಮಾತ್ರ ದಡಸೇರಲು ಸಾಧ್ಯವೆಂಬ ವಿತಂಡ ವಾದ ಬೇರೆ.

ಸಾಗರ ನೀಲಿ,ಅಂಬರ ನೀಲಿ ಹಾಗಾಗಿ ನಾನು ನೀಲಾಂಬರಿಯೆಂದು ಅಶರೀರ ವಾಣಿ ಮೊಳಗಿತ್ತು. ತಾಪದ ತಾಪಮಾನ ಏರಿಕೆಯಾದಂತೆಲ್ಲ,ನದಿ ಮೂಲವ ಹುಡುಕುವ ಹುಂಬುತನ ನನಗಾಗಿ ಹೆದ್ದಾರಿ ಹಾಸಿದಂತೆ ಕಾಣುತ್ತಿತ್ತು.ಆಕ್ರೋಶಕೆ ಬೆಲೆಯಿಲ್ಲ. ಉಪ್ಪುನೀರು ಲೇಪಗೊಂಡ ದೇಹ ಜಿಗುಟಾಗಿ ಸಿಹಿನೀರ ಅರಸುತ್ತಿತ್ತು.ಕಳೆದು ಕೊಳ್ಳಬೇಕಿದೆ ಎಲ್ಲ ಋತುಮಾನಗಳ ಜಾಡ್ಯವನ್ನು.ಅವನ ಅಮೂರ್ತ ಚೇತನ ಅತ್ಯಗತ್ಯವಾದ ತಳಹದಿ ಹಾಕಿ ಅದರ ಮೇಲೆ ಪ್ರಭಾವ ಬೀರುವ ಮೂಲಕ ತನ್ನ ಹೆಸರನ್ನು ನನ್ನ ಹಣೆ ಪಟ್ಟಿಮಾಡಿ ಕಾಲಕ್ರಮೇಣ ಭೂಗತವಾದರೆ ಅಲ್ಲಿಗೆ ಎಲ್ಲವೂ ಮುಕ್ತಾಯವಾದಂತೆ.

ಕಚ್ಚೆಕಟ್ಟಿ,ತುರಬನ್ನು ತಿರುವಿ ಕಟ್ಟಿ,ಬಳೆಗಳ ಸದ್ದಿಗೆ ವಿಚಲಿತಳಾಗದೇ ರೊಚ್ಚಿಗೆದ್ದು ಕಿಡಿಕಾರಿದವಳ ಎದುರು ಯಾರು ನಿಲ್ಲದೆ ಓಡಿಹೋದವರ ಕಂಡು ಸತ್ಯ ಕಣ್ಮುಂದೆ ಗೋಚರವಾಗಿತ್ತು. ಒಂಟಿಯಾಗಿರುವುದು ಸುಲಭವಲ್ಲ,ತ್ಯಾಗಕೆ ಅನುಕಂಪದ ಲೇಪ ಬೇಡವೆಂದು ನಗುವಿನ,ಹಾಸ್ಯದ ಕುಂಚದಲಿ ಅರಳುವ ನೈದಿಲೆಯಂತೆ ದಿನ ಹುಟ್ಟಿ ದಿನ ಸಾಯುವ ಪುಷ್ಪವಾದರೂ ಸರಿ ಇದ್ದಷ್ಟು ಗಳಿಗೆ ಹೃದಯದಿ ಬಚ್ಚಿಟ್ಟು ಕಾಪಿಟ್ಟ ಮನಸಿಗೆ ನಿನೊಂದು ಅಗಮ್ಯ ಶಕ್ತಿ. ಯಾರಿಗೆ ಯಾರು ಮೊದಲಿಗರೆಂಬ ಪ್ರಶ್ನೆ? ಅಮರತ್ವದ ಜೇನ ಅರಸುವವ ಮೂರ್ಖ.

ಕಣ್ಣೆದುರು ಕಾಣುವ ಸಜೀವ ಸಂಜೀವನಿಗೆ ಮಾರು ಹೋದ ಪ್ರಪಂಚವಿದು.ಪ್ರಕೃತಿಯ ಜಾಲದಲ್ಲಿ ವಿಕೃತಿ ಮೆರೆದರೆ ಕೊನೆಯುಂಟೆ? ಸ್ವಾರ್ಥವೆಂಬ ಸಾಗರದ ವಿರುದ್ಧ ದಿಕ್ಕಿನಲ್ಲಿ ಈಜಿದರೆ ಮಾತ್ರ ನಿಸ್ವಾರ್ಥದ ಅಮೃತ ಲಭಿಸಲು ಸಾಧ್ಯ.ಈಜಿ ದಡ ಸೇರುವ ಮೊದಲು ಪ್ರಾಣ ಪಕ್ಷಿ ಹಾರಿಹೋದರೆಂಬ ಆತಂಕ.ನಂಬಿಕೆಯ ಅಸ್ತ್ರ ಕಾವಲಿರುವಾಗ ನಿರಾಶೆಯೆಲ್ಲಿಂದ? ಚೆಂಗುಲಾಬಿಯ ಸ್ಪರ್ಶ ಅದರಗಳು ಸವಿದಾಗಿಂದ ಎಲ್ಲಿಲ್ಲದ ಪ್ರಾಮುಖ್ಯತೆಯನ್ನು ಅಂತರಂಗ ಪಡೆದಂತಿದೆ.ನನಗೇನು ಬೇಡಿಕೆಯ ಹಂಗಿಲ್ಲ…ಅವನ ನಿರೀಕ್ಷೆಯಲಿ ಉಪವಾಸ ಸತ್ಯಾಗ್ರಹವನ್ನು ಕೈಗೊಂಡಿಲ್ಲ.ಕಾರಣ ಅವನು ಹೇಳಿ ಹೋಗಿಲ್ಲ.ಭ್ರಮೆ ಇರದ ಏಕೈಕ ಅಸ್ಮಿತೆಯೆಂದರೆ ನನ್ನೊರತು ಬೇರಾರಿಲ್ಲ.

ಹೊರಗೆ ಸುಯ್ಯಗುಟ್ಟುವ ತಂಗಾಳಿಗೆ ತಂಪಾಗದೆ,ಮಂಜುಗಡ್ಡೆಯ ರೂಪತಾಳಿ ಎದೆಯೊಳಗಿಳಿದವನು ಹೇಳಹೆಸರಿಲ್ಲದೆ ನೀರಾಗಿ ನಿಂತಿದ್ದ.ಅಲ್ಲೆ ನೇಸರನಿಗಿಂತ ಬಿಸಿ ನೀನು! ನಾನೆಂದು ಗೊತ್ತಿದ್ದರೂ ಅಪ್ಪದೆ,ನಿನಗಾಗಿ ಘನೀಕರಿಸಿದ ಹಿಮದಿಂದ ಆವೃತವಾಗಿ ತಂಪಾಗಲೆಂಬ ಆಸೆಯಲಿ ಬಳಿ ಬಂದರೆ,ಕೈಗೆಟುಕದೆ ಬೊಗಸೆಯೊಳಗಿಂದ ಜಾರುವಂತೆ ಮಾಡಿದಿಯಲ್ಲೆ ನೀಲು ಎಂದಾಗ ರೂಪ ತಳೆದ ಭಾವವದು.ನೀಲಾಗಸದಲ್ಲಿ ಬರೆದಿದ್ದು ನಿನ್ನ ಪಾಲು ಬರೆದಿಕೊ…ಒಂದುಗಳಿಗೆ ಕಣ್ಮುಚ್ಚಿ ನೋಡು.ನಿನ್ನೊಳಗಿನ ನಾನು ಮೂರ್ತ ರೂಪ ತಾಳಿದ್ದು ಗೋಚರಿಸುವುದು.ನಾನಾರೆಂಬ ಪ್ರಶ್ನೆ ನಿನ್ನ ಕಾಡದಿರಲಿ
ಭೂವಿಯಗಲದುದ್ದಕ್ಕೂ ದಿಕ್ಸೂಚಿಯಂತೆ.ನೀನು ನಾನು ಬೇರಲ್ಲ.ಒಂಟಿ ಬದುಕು ಕಂಟಕಕ್ಕೆ ದಾರಿ ಮಾಡಿಕೊಟ್ಟಂತೆನಿಸಿ ಬಳಿ ಬಂದಿರುವೆ ಕಣೇ…. ಎಂದಾಗ ನಗುವೊಂದು ಮರಳಿ ಅರಳಿ ಎಲ್ಲ ಕ್ಲೇಶವೂ ಕಳಚಿದಂತೆಯೇ ಅನ್ನಿಸಿತ್ತು.ಬಯಲುಗಳಲಿ ಬೀಸುವ ತಂಗಾಳಿಗೆ ಅಡೆತಡೆಗಳ ಹಂಗಿಲ್ಲ…ಅನಿಸುತಿದೆ ಯಾಕೊ ಏನೋ….ಗೀತೆಯ ಪಲ್ಲವಿ ಕಾಡುತ್ತಿತ್ತು…

+10

9 thoughts on “ಕ್ಯಾಲೆಂಡರ್ ಬದಲಾಗಿದೆ…. ಶಿವಲೀಲಾ ಹುಣಸಗಿಯವರ ಬರಹ

 1. ತುಂಬ ಸೊಗಸಾಗಿದೆ ಮೇಡಮ್..

  +1
 2. ಈ ಲೇಖನ ತುಂಬಾ ವಿಭಿನ್ನವಾಗಿದೆ ರಿ….ವಾಸ್ತವದ ಮೂರ್ತ ಭವದ ಉಲ್ಲೇಖಗಳು ತುಂಬಾ ಚೆನ್ನಾಗಿ ಮೂಡಿ ಬಂದಿದೆ ರೀ ಮೇಡಂ,,ರಸವತ್ತಾಗಿದೆ. 🌷🙏🏻🌷

  +1
 3. ಬದಲಾದ ಕ್ಯಾಲೆಂಡರ್ ಮತ್ತೊಮ್ಮೆ ನೋಡುವಂತೆ ಮಾಡಿದೆ ಲೇಖನ ಸೊಗಡಿನಿಂದ ಅರ್ಥಗರ್ಭಿತವಾಗಿದೆ.ಇಷ್ಟವಾಯಿತು.

  +3
 4. ವಿಭಿನ್ನ ಬರೆವಣಿಗೆಯ ಶೈಲಿಯಿಂದ ಮನಸೆಳೆಯುವ ಅಂಕಣ ಕ್ಯಾಲೆಂಡರ್ ಬದಲಾಗಿದೆ……
  ಕ್ಯಾಲೆಂಡರ್ ಬದಲಾದಂತೆ ನಮ್ಮ ಮನಗಳು ಬದಲಾವಣೆಗೊಂಡು ಹೊಸತನವ ಪಡೆದರೆಷ್ಟು ಸೊಗಸೆಂಬ ಆಶಯದೊಳು ಮೂಡಿರುವ ಶಿವಲೀಲಾರವರ ಲೇಖನ ಸೊಗಸಾಗಿ ಮೂಡಿಬಂದಿದೆ….

  +3
 5. ಕ್ಯಾಲೆಂಡರ್ ಬದಲಾದರೇನಂತೆ ? ಪಂಚಾಂಗ ಬದಲಾದರೇನಂತೆ? ಸಾಗರನ ಬಾಹುಗಳಲ್ಲಿ ಸಿಕ್ಕು ನರಳಬೇಕೆನ್ನುವ ಭಾವ ಸದಾ ನವನವೀನ..! ಅಂತರಂಗ ದೊಳಗೆ ಪ್ರೀತಿಯ ಸೆಲೆಯನ್ನು ಅದುಮಿ ಹಿಡಿದು, ಜೊತೆಜೊತೆಗೇ ತತ್ವಜ್ಞಾನವನ್ನು ಗುಣುಗುಣಿಸಿದ ಪರಿ ಮುದ ನೀಡಿತು..!! ಅಭಿನಂದನೆಗಳು ಶಿವಲೀಲಾ..

  ಶ್ರೀರಂಗ ಕಟ್ಟಿ ಯಲ್ಲಾಪುರ.

  +1
 6. ವಾಸ್ತವಿಕತೆಯನ್ನು ಬಿಂಬಿಸುವ ಸಾಲುಗಳಿರುವ ಸುಂದರ ಬರಹ.👌👍💛

  +1

Leave a Reply

Your email address will not be published. Required fields are marked *

error: Content is protected !!