ಹೀಗೊಂದು ಮಾತುಕತೆಯೊಳಗಿಂದ..ಅನುರಾಧ ಪಿ ಸಾಮಗ ಅವರ ಬರಹ


ಬದುಕನ್ನು ತೆರೆದ ಕಣ್ಣಿಂದ ನೋಡಿ, ಕಂಡುಕೊಂಡ ಅನುಭವಸಾರದಲ್ಲಿ ಮಾತು ಅನ್ನುವ ಅದ್ಭುತ ಕಲೆಯನ್ನು ಅದ್ದಿ ನಮ್ಮೆದುರು ಒಂದು ಸಂವೇದನಾಯುಕ್ತ ಚಿತ್ರಣವನ್ನಾಗಿಸಿ ತೆರೆದಿಡುವ ಮತ್ತು  ಅದರಲ್ಲಿ ಸುಲಭಗ್ರಾಹ್ಯ ಪಾಠವನ್ನು ತೋರುವ ಜಗ್ಗಿಸದ್ಗುರುವಿಗೆ ಕಿವಿಯಾಗುವುದೆಂದರೆ ಅದು ನನಗೆ ದಿನವನ್ನು ಚಂದಗಾಣಿಸುವ ದಾರಿಗಳಲ್ಲೊಂದು.
ಒಂದೆಡೆ ಅವರು ಬಹಳ ದೊಡ್ಡ ಸಭೆಯೊಂದನ್ನು ಉದ್ದೇಶಿಸಿ ಮಾತಾಡುತ್ತಾ ನಡುವೆ “ಇಂದಿನ ದಿನ ಬೆಳಿಗ್ಗೆ ಸೂರ್ಯ ಸರಿಯಾದ ಸಮಯಕ್ಕೆ ಮೂಡಿದ” ಅಂತಂದು ಸುಮ್ಮನಾಗುತ್ತಾರೆ. ಸಭೆಯಲ್ಲಿ ಗಟ್ಟಿ ನಿಶ್ಶಬ್ದ! ಪುನಃ ಅದೇ ಸಾಲನ್ನು ಹೇಳುತ್ತಾರೆ. ಆಗ ನಿಶ್ಶಬ್ದ ಸ್ವಲ್ಪವೇ ಸ್ವಲ್ಪ ಕದಡುತ್ತದೆ, ಮತ್ತೆ ಅದೇ ಸಾಲು ಪುನರಾವರ್ತಿತವಾದಾಗ ಗುಸುಗುಸು ಗಟ್ಟಿಯಾಗುತ್ತದೆ. ಅವರ ಮಾತಿನ ತುಂಟ ವರಸೆಯ ಪರಿಚಯವಿದ್ದವರಲ್ಲಿ ಇದರಲ್ಲೇನೋ ಗಮ್ಮತ್ತಿದ್ದರೂ ಇದ್ದೀತನಿಸಿ ಮುಳುಮುಳು ನಗುವೂ ಬಂದಿರುತ್ತದೆ. ಸಣ್ಣ ಮೌನದ ನಂತರ ಸದ್ಗುರು ಮುಂದುವರೆಸುತ್ತಾರೆ, ‘ಇವತ್ತು ಬ್ರಹ್ಮಾಂಡದೊಳಗೆ ಯಾವುದೇ ಆಕಾಶಕಾಯ ಡಿಕ್ಕಿಯಾಗಲಿಲ್ಲ…” ಹೂಂ….. ಅಂತ ಒಂದಷ್ಟು ದನಿಗಳು ಉದ್ಗರಿಸುತ್ತವೆ. “ನನಗೆ ಕೇಳಿಸಲಿಲ್ಲ, ತಕ್ಕುದಾದ ಸ್ಪಂದನೆಗೆ ಕಾಯುತ್ತಿದ್ದೇನೆ” ಅನ್ನುತ್ತಾ ಸಭಿಕರೆಡೆಗೆ ಕಿವಿಯನ್ನು ಮುಂದಕ್ಕೊಡ್ಡುತ್ತಾರೆ. ಯೇ….. ಅಂತ ಹರ್ಷೋದ್ಗಾರವೊಂದು, ಎರಡು, ಮೂರು, ನೂರಾಗಿ ಇಡೀ ಸಭೆಯೇ ಸಂಭ್ರಮಿಸುತ್ತದೆ. ಎಂದಿನಂತೆ ಹೆಲೋ…ಹ್ಞಾಹ್ಞಾ…. ಅಂತ ಸದ್ಗುರುರವರ ಆ ಮುಕ್ತ ನಗೆಯಲ್ಲಿ ಎದುರಿನವರಿಗೆ ತಾನು ಹೇಳಬೇಕಾದ್ದನ್ನು ತಲುಪಿಸಿದ ಸುಖ ನಮಗೆ ಕಾಣುತ್ತದೆ..


ಹೌದಲ್ಲವೇ… ನಾವು ಇದ್ದೇವೆ, ಅದೂ ಸುಮಾರಷ್ಟು ಸುಸೂತ್ರವೇ ಆದ ಬದುಕಿನೊಳಗೆ ಅನ್ನುವುದೇ ಒಂದು ಸಂಭ್ರಮದ ವಿಷಯವಲ್ಲವೇ… 
ಆದರೆ ಅಷ್ಟು ಸಹಜವಾಗಿ ಇದನ್ನು ಮನಗಾಣಲು ನಮಗೆ ಯಾಕೆ ಸಾಧ್ಯವಾಗುವುದಿಲ್ಲ!
ಇಡೀ ವಿಶ್ವದ ಬೃಹತ್ ವಹಿವಾಟು ಏನೊಂದೂ ಅಸಹಜ ಅಥವಾ ಪ್ರತಿಕೂಲ ಘಟನೆಯಿಲ್ಲದೇ ಎಲ್ಲವೂ ಸುಸೂತ್ರವೆಂಬಂತೆ ನಡೆದುಹೋಗುತ್ತಿರುತ್ತದೆ, ಆದರೆ ನಮ್ಮೊಬ್ಬರಿಗೆ ಸಂಬಂಧಿಸಿದ ಒಂದೇ ಒಂದು ಸಣ್ಣ ಅಸಮಾಧಾನ ನಮ್ಮ ಇಡೀ ದಿನವೇ ಸರಿಯಿಲ್ಲ ಅಂತ ನಾವು ತೀರ್ಮಾನಿಸಿಬಿಡಲು ಕಾರಣವಾಗಿಬಿಡುತ್ತದೆ. ಯಾಕಿದು ಹೀಗೆ?
ನಮ್ಮ ದೇಹದಲ್ಲಿ ಪ್ರತಿನಿಮಿಷವೂ ಹತ್ತು ಕೋಟಿಯಷ್ಟು ಜೀವಕೋಶಗಳು ಸತ್ತು ಹತ್ತುಕೋಟಿಯಷ್ಟು ಜೀವಕೋಶಗಳು ಹುಟ್ಟುತ್ತವೆಯಂತೆ. ಅಂದರೆ ಪ್ರತಿಕ್ಷಣವೂ ಹಳತನ್ನು ಕಳಚಿ ಹೊಸತಾಗಲು ಅಷ್ಟರಮಟ್ಟಿನ ಅವಕಾಶಗಳು ನಮ್ಮ ದೇಹದಲ್ಲಿ ಅದರಷ್ಟಕ್ಕೇ ನಮಗಾಗಿ ಉಂಟಾಗುತ್ತಿವೆ. ಆದರೆ ಆ ಕ್ಷಣಗಳು, ಅವುಗಳೊಳಗಿನ ಅವಕಾಶಗಳು ನಮ್ಮ ಉಪಯೋಗಕ್ಕೆ ಬರದೆಯೇ ಜಾರಿಹೋಗುತ್ತಿವೆ.
ಯಾಕಿರಬಹುದು?
 ಯಾಕಂದರೆ ನಾವು ಗಮನಿಸುತ್ತಿಲ್ಲ. ಏನನ್ನು ಗಮನಿಸುತ್ತಿಲ್ಲ?
ನಮ್ಮನ್ನು, ನಮ್ಮ ಭೌತಿಕ ಅಸ್ತಿತ್ವವೆಂಬ ಅತ್ಯದ್ಭುತ ಯಂತ್ರಗಾರಿಕೆ ಮತ್ತು ಮನಸೆಂಬ ಅಮೂರ್ತ ಕಾರ್ಖಾನೆಯೊಂದು ನಮ್ಮೊಳಗೆ ಪ್ರತಿಕ್ಷಣ ನಡೆಸುತ್ತಿರುವ ಚಮತ್ಕಾರಿಕ ಚಟುವಟಿಕೆಗಳನ್ನು,  ಜೊತೆಗೆ ನಮ್ಮ ಹೊರಗೂ ನೂರಾರು ವಿಸ್ಮಯಗಳು ಜರುಗುತ್ತಿರುವುದನ್ನು ನಾವು ಗಮನಿಸುತ್ತಿಲ್ಲ.


ಯಾಕೆ ಹಾಗಾಗುತ್ತಿದೆ?
ಯಾಕೆಂದರೆ ಬಹುಶಃ ನಮ್ಮ ಜೀವನವು ಈಗ ಯೋಚನೆ ಮತ್ತು ಭಾವನೆಗಳಲ್ಲಿ ಕಳೆದುಹೋಗಿದೆ. ಸ್ವಕೇಂದ್ರಿತ ಯೋಚನೆ ಮತ್ತು ಸ್ವಾನುಕಂಪ, ಸ್ವಸಮರ್ಥನೆಗಳಿಗೆ ಬೇಕಾದ ಭಾವಗಳು ಈ ಹೊತ್ತು ಮನಸುಗಳನ್ನು ಆವರಿಸಿವೆ ಮತ್ತು ತುಂಬಿಕೊಂಡಿವೆ. ಹಾಗಾಗಿ ನಮಗೆ ಅಕ್ಷರಶಃ ಗಮನಿಸುವುದು ಮರೆತೇಹೋಗಿದೆ.
ಈಗ ಕೆಲಸಮಯದ ಹಿಂದೆ ವಿಜ್ಞಾನಿಯೊಬ್ಬರಿಗೆ ಪ್ರತಿ ಇಪ್ಪತ್ತು ಚಿಲ್ಲರೆ ದಿನಗಳಿಗೊಮ್ಮೆ ಪೂರ್ತಿ ನಿರಾಹಾರವಿದ್ದರೆ ಅದರ ಭೌತಿಕ ಮತ್ತು ಬೌದ್ಧಿಕ ಪ್ರಯೋಜನಗಳೇನೇನು ಎಂಬ ವಿಷಯದ ಕುರಿತಾದ ಸಂಶೋಧನೆಗಾಗಿ ಪ್ರಶಸ್ತಿಯಾದದ್ದರ ಬಗ್ಗೆ ಓದುತ್ತಿದ್ದೆ. ಖಗೋಳ ಶಾಸ್ತ್ರದ ಪ್ರಕಾರ ಮತ್ತು ನಮ್ಮ ಜೀವಶಾಸ್ತ್ರದ ಪ್ರಕಾರ ಆ ದಿನದಲ್ಲಿ ನಿರಾಹಾರ ಮತ್ತು ಸದಾ ಏಕಾಗ್ರತೆಯಲ್ಲಿ, ಧ್ಯಾನದೊಳಗೆ ಇರುವುದು ಹೇಗೆ ಲಾಭದಾಯಕ ಮತ್ತದು ಉಳಿದ ದಿನಗಳಿಗಿಂತ ಹೇಗೆ ಹೆಚ್ಚು ಪ್ರಭಾವಿಸಬಲ್ಲುದು ಎನ್ನುವುದರ ಬಗ್ಗೆ ಅಲ್ಲಿ ಒಂದು ವಿಡಿಯೋದಲ್ಲಿ ಸವಿಸ್ತಾರವಾಗಿ ವಿವರಿಸಲಾಗಿತ್ತು. ಇದು ನಮಗೆ ಈಗ ಲಭ್ಯವಿರುವ ಎಲ್ಲ ತಾಂತ್ರಿಕ ಸವಲತ್ತುಗಳ ಆಧಾರದ ಮೇಲೆ ಆದ ವಿಷಯಸಂಗ್ರಹಣೆ ಮತ್ತು ಪ್ರಾಯೋಗಿಕ ಫಲಿತಾಂಶಗಳ ಆಧಾರದ ಮೇಲೆ ಕಂಡುಕೊಂಡದ್ದನ್ನು ತಿಳಿಸುವ ವಿಡಿಯೋ ಆಗಿತ್ತು. ಆದರೆ ನಮ್ಮ ಅಂದರೆ ಭಾರತದಲ್ಲಿನ ಪೂರ್ವಜರು ಶತಮಾನಗಳ ಹಿಂದೆಯೇ ಪ್ರತಿ ಪಕ್ಷದ ಹನ್ನೊಂದನೇ ದಿನವನ್ನು ಏಕಾದಶಿ ಎಂದು ಕರೆದಿದ್ದಾರೆ ಮತ್ತು ಅಂದಿನ ದಿನ ನಿರ್ಜಲ ಉಪವಾಸವನ್ನು ವಿಧಿಸಿದ್ದಾರೆ. ಉಪವಾಸವೆಂದರೆ ಸಮೀಪದಲ್ಲಿರುವುದು ಅಂದರೆ, ದೇವರ ಸಮೀಪದಲ್ಲಿ ಅಂದರೆ ಆ ಜಗನ್ನಿಯಾಮಕ ಶಕ್ತಿಯ ಸ್ಮರಣೆಯಲ್ಲಿರುವುದು ಎಂದು ಹೇಳಿದ್ದಾರೆ. ಅದನ್ನವರು ತಿಳಕೊಂಡ ಬಗೆ ಹೇಗೆ? ಯಾವುದೇ ತಾಂತ್ರಿಕ ಸವಲತ್ತಿನ ಬೆಂಬಲವಿಲ್ಲದೆ, ಪ್ರತಿ ಸೂರ್ಯಗ್ರಹಣ, ಚಂದ್ರಗ್ರಹಣಗಳ ಬಗೆಗೆ ಸಾವಿರಾರು ವರ್ಷಗಳ ಹಿಂದೆ ಇಂಥಿಂಥ ವರ್ಷ ಇಂಥದೇ ಹೊತ್ತಿಗೆ ಆಗಲಿದೆ ಅಂತ ನಿಖರವಾಗಿ ಅವರು ಬರೆದಿಟ್ಟದ್ದಾದರೂ ಹೇಗೆ? ಅದಿರಲಿ, ಗೆಡ್ಡೆ ಗೆಣಸುಗಳು, ಸೊಪ್ಪು ತರಕಾರಿಗಳು ಇಂಥವೇ ತಿನ್ನಲು ಬರುವಂಥವು, ಇಂಥವು ಅಲ್ಲ ಎಂದು ತಿಳಕೊಂಡ ಬಗೆ ಹೇಗೆ? ಅಡುಗೆಮನೆಯ ಸಾಮಾಗ್ರಿಗಳಲ್ಲೇ ಹಲವಾರು ರೋಗವಿಕಾರಗಳಿಗೆ ಮದ್ದನ್ನು ಕಂಡುಹಿಡಿದು ಬಳಸಿದ್ದು ಹೇಗೆ?
ಅವರು ಬರೀ ತಮ್ಮ ಸುತ್ತಮುತ್ತಲನ್ನು ಗಮನಿಸಿದರು. ಆಕಾಶಕಾಯಗಳ ಚಲನೆಯನ್ನು, ಆ ಚಲನೆಗಳು ನಮ್ಮ ಸುತ್ತಲಿನ ಪ್ರಕೃತಿಯ ಮೇಲೆ ಮಾಡುವ ಪರಿಣಾಮಗಳನ್ನು, ಆ ಪರಿಣಾಮಗಳಿಗೆ ಸರಿಯಾಗಿ ನಮ್ಮ ದೇಹ ಮತ್ತು ಮನಸಿನಲ್ಲಾಗುವ ಬದಲಾವಣೆಗಳನ್ನು ಗಮನಿಸುತ್ತಾ ಹೋದರು. ಪ್ರಕೃತಿ ಮತ್ತು ತಮ್ಮ ನಡುವೆ ನಡೆಯಬಹುದಾದ ಕೊಡುಕೊಳುವಿಕೆಯ ಬಗ್ಗೆ ಆಳವಾಗಿ ಗಮನಿಸಿದರು. ಹಾಗೆ ಗಮನಿಸುವುದನ್ನೇ ಧ್ಯಾನದಂತೆ ಅಭ್ಯಸಿಸಿದರು. ಮತ್ತು ಅಲ್ಲಿ ದೊರೆತ ಜ್ಞಾನದ ಮೂಲಕ ಇಂಥ ಬದುಕಿಗೆ  ಉಪಯುಕ್ತ ವಿಷಯಗಳನ್ನು ಕಂಡುಕೊಂಡರು, ಬಳಸಿಕೊಂಡರು ಮತ್ತು ಆ ಜ್ಞಾನವನ್ನು ಮುಂದಿನ ಪೀಳಿಗೆಗೆ ಆಚಾರವಿಚಾರಗಳ ಮೂಲಕ ಉಳಿಸಿಕೊಟ್ಟರು. ಅವರಿಗೆ ಹೋಲಿಸಿದರೆ ನಾವು ಈಗ ನಮ್ಮ ಒಳಗಿನ ಸ್ವಕೇಂದ್ರಿತ ವಿಷಯಗಳ ಬಗ್ಗೆ, ಲಾಭನಷ್ಟಗಳ ಬಗ್ಗೆ  ಮತ್ತು ಸುತ್ತಲಿನ ಮನುಷ್ಯ ಸಂಬಂಧಗಳೊಂದಿಗೆ ಥಳಕು ಹಾಕಿಕೊಂಡ ಭಾವನೆ, ಯೋಚನೆಗಳಲ್ಲಿ ಹೆಚ್ಚು ಮುಳುಗಿಹೋಗಿದ್ದೇವೆ.

ನಮ್ಮಿಂದಾಚೆ ನಿಂತು ನಮ್ಮನ್ನಾಗಲಿ, ಇತರ ವಿಷಯಗಳನ್ನಾಗಲಿ ಗಮನಿಸುವುದು ಗಣನೀಯವಾಗಿ ಕಮ್ಮಿಯಾಗಿದೆ. ಹಾಗಾಗಿ ಗಮನಿಸಲ್ಪಡದೇ ಹೋಗುವ ನಮ್ಮದೇ ಎಷ್ಟೋ ವಿಷಯಗಳ ಕಾರಣದಿಂದಾಗಿ ದೈಹಿಕ, ಮಾನಸಿಕ ಕೊರತೆಗಳಿಗೂ ಈಡಾಗುತ್ತಿದ್ದೇವೆ.
ಮೊನ್ನೆ ತಾನೇ ಹುಣ್ಣಿಮೆ ಬಂದುಹೋಯಿತು. ಅಂದಿನ ದಿನ ರಾತ್ರಿ ಆಕಾಶ ನೋಡಿದಾಗ ಮನಸೆಳೆದ ಚಂದ್ರನ ಚಿತ್ರವನ್ನು ಬಗೆಬಗೆಯ ಭಂಗಿಯಲ್ಲಿ ಫೋನ್ ನಲ್ಲಿ ಸೆರೆಹಿಡಿದು ಸ್ನೇಹವಲಯದಲ್ಲಿ ಹಂಚಿಕೊಂಡಿದ್ದೆ. ಒಂದು ನೆಲೆಯಿಂದ ನೋಡಿದಾಗ ಅವ ಕತ್ತಲಿನ ಮೂಗಿನ ನತ್ತನ್ನು ನೆನಪಿಸಿದರೆ, ಒಂದು ಕಡೆಯಿಂದ ಆಕಾಶದ ಹಣೆಬೊಟ್ಟಿನಂತೆ ಕಾಣುತ್ತಿದ್ದ. ಕತ್ತಲಿನ ಕಪ್ಪಿನೊಳಗೆ ಕಪ್ಪು ಗೆರೆಗಳೆಳೆದ ಹಾಗೆ ಕಾಣುವ ಉದ್ದುದ್ದ ಮರಗಳ ಅಡ್ಡಡ್ಡ ಹರವಿಕೊಂಡ ರೆಂಬೆ, ಅದರಲ್ಲಿನ ಪುಟಾಣಿ ಎಲೆರಾಶಿ, ಅದಕ್ಕೆ ಲೇಪನಗೊಂಡ ಬೆಳದಿಂಗಳು.. ಆಕಾಶವೆಂಬ ಆಕಾಶವೇ ತುಂಬ ಆಕರ್ಷಕ ಮತ್ತು ಮನಸಿಗೆ ತಂಪೆರೆಯುವಂತಿತ್ತು.  ಪೂರ್ಣಚಂದಿರನ ಹಲವು ಭಂಗಿಗಳು ಮತ್ತು ಅವುಗಳ ಪ್ರತಿ ಮನಸಿನಲ್ಲಿ ಮೂಡಿದ ಸಾಲುಗಳನ್ನುವಾಟ್ಸಾಪ್ ಸ್ಟೇಟಸ್ ಆಗಿ ಹಾಕಿದ್ದೆ. ಬಂದ ಪ್ರತಿಕ್ರಿಯೆಗಳಲ್ಲಿ ಹಲವು, ತಿಂಗಳೂ ಬರುವ ಹುಣ್ಣಿಮೆಯನ್ನು, ಚಂದ್ರನನ್ನು ಅಷ್ಟೊಂದು ಸಂಭ್ರಮಿಸುವುದು ವಿಚಿತ್ರವೆಂಬಂತೆ ನೋಡಿದರೆ, ಇನ್ನು ಕೆಲವು ಮಾಡಲು ಬೇರೆ ಒಳ್ಳೆಯ ಕೆಲಸವಿಲ್ಲದವರಿವರು ಅನ್ನುವ ಭಾವದಲ್ಲಿತ್ತು. ಬೆಂಗಳೂರಿನ ಸ್ನೇಹಿತನೊಬ್ಬನೇ ಹೊಟ್ಟೆಕಿಚ್ಚಾಗುತ್ತಿದೆ, ನಮಗೆ ಹೀಗೆ ಆಗಸವನ್ನು, ಅದರ ಚಂದವನ್ನು ಕಣ್ತುಂಬುವಷ್ಟು ನೋಡುವ ಅವಕಾಶವೇ ಇಲ್ಲ, ಎಲ್ಲಿ ನೋಡಿದರಲ್ಲಿ ಆಗಸವನ್ನ ಮುಟ್ಟಲು ಹವಣಿಸುತ್ತಿರುವ ಎತ್ತರೆತ್ತರದ ಕಟ್ಟಡಗಳು ಇಂಥ ನೋಟಗಳಿಗೆ ಅಡ್ಡ ಇಲ್ಲಿ ಎಂದು ಅಲವತ್ತುಕೊಂಡಿದ್ದ, ಇನ್ನು ಕೆಲವೇ ಕೆಲವರು ಚಂದ್ರನ ಚೆಲುವಿನ ಬಗ್ಗೆ ಮಾತಾಡಿದ್ದೂ ಇತ್ತು.  ಅಂದರೆ, ಮುಕ್ಕಾಲರಷ್ಟು ಜಗತ್ತು ಇಂಥದನ್ನೆಲ್ಲ ಗಮನಿಸುವ ಬಗ್ಗೆ ಒಲವು ಬಿಡಿ, ಇಂಥ ವಿಷಯಗಳಲ್ಲಿ ಸೊಗಸಿದೆ ಅನ್ನುವ ಕನಿಷ್ಠ ಜ್ಞಾನವೂ ಇಲ್ಲದ ಹಂತದಲ್ಲಿದೆ.
ಸದ್ಗುರು ಹೇಳುತ್ತಾರೆ,  “ನೆರೆಯವರ ಏಳ್ಗೆ, ಪತನಗಳಲ್ಲಿ, ನಮ್ಮ ಲಾಭನಷ್ಟ ಲೆಕ್ಕಾಚಾರದಲ್ಲಿ ಮಗ್ನರಾಗುವ ಬದಲು, ನಮ್ಮೊಳಗಿನ ಸ್ವಾರ್ಥಕೂಪದೊಳಗೆ ಮಂಡೂಕವಾಗುವ ಬದಲು  ಸೂರ್ಯೋದಯವನ್ನು, ಸೂರ್ಯಾಸ್ತವನ್ನು ನೋಡಿ, ಹೂವು ಅರಳುವುದನ್ನ ಗಮನಿಸಿ, ಅದರ ಘಮದಲ್ಲಿ ಒಂದುಕ್ಷಣ ಕಳೆದುಹೋಗಿ, ಹಕ್ಕಿಯ ಗೂಡು, ತತ್ತಿ, ಮರಿ ಎಂಬ ಸೋಜಿಗಗಳನ್ನು ಗಮನಿಸಿ, ಚಿಟ್ಟೆಯನ್ನು ಗಮನಿಸುತ್ತಾ ಹೋಗಿ, ಕೊನೆಗೊಮ್ಮೆ ಈ ಎಲ್ಲ ವಿಸ್ಮಯಗಳಿಗೆ ನಿಮ್ಮೊಳಗು ಸ್ಪಂದಿಸುವ ಚೆಂದವನ್ನೂ ಗಮನಿಸಿ, ನಿಮ್ಮೊಳಗಿನ ಚೈತನ್ಯವು ಆಗ ಸ್ಫುಟಗೊಳ್ಳುವ ಸುಖವನ್ನು ನಿಮ್ಮದಾಗಿಸಿಕೊಳ್ಳಿ.. ಆರೋಗ್ಯವಾಗಿರಬೇಕಾದರೆ ಮೊದಲು ಬೆರಗಾಗುವುದನ್ನು, ಚಕಿತಗೊಳ್ಳುವುದನ್ನು, ಸಂತಸಗೊಳುವುದನ್ನು ಅಭ್ಯಾಸ ಮಾಡಿಕೊಳ್ಳಿ….”

+7

4 thoughts on “ಹೀಗೊಂದು ಮಾತುಕತೆಯೊಳಗಿಂದ..ಅನುರಾಧ ಪಿ ಸಾಮಗ ಅವರ ಬರಹ

  1. ನಿಜ ನಾವು ಪ್ರಕೃತಿಯೊಂದಿಗೆ ಬೆರೆತರೆ ನಮ್ಮ ಮನಸ್ಸು, ದೇಹ ಆರೋಗ್ಯವಾಗಿರುತ್ತದೆ. ಚೆನ್ನಾಗಿದೆ ಲೇಖನ ಪ್ರಸ್ತುತ ಬದುಕಿಗೆ ಬೇಕಿರುವುದೆ ಇದು.

    0
  2. ಗಮನಿಸುವಕೆ ಮನುಷ್ಯನ ಸೂಕ್ಷ್ಮವಾದ ಕೌಶಲ್ಯ… ಅದರ ಬಗ್ಗೆ ಅರಿವು ಮೂಡಿಸಿರುವಿರಿ. ✍️👌🙏🏼

    0

Leave a Reply

Your email address will not be published. Required fields are marked *

error: Content is protected !!