ಮುಚ್ಚಿಟ್ಟ ಪ್ರೇಮಪತ್ರದ ಗುಟ್ಟು..ಶ್ರೀದೇವಿ ಕೆರೆಮನೆಯವರ ಬರಹ

‘ನೀನು ನಿನ್ನ ನೋಟ್ ಬುಕ್ ನ ಕವರ್ ಚೇಂಜ್ ಮಾಡಲ್ವ?’
‘ಯಾಕೋ ಕೋತಿ ನನ್ನ ನೋಟ್ ಬುಕ್ ನ ಬೈಂಡ್ ಹಿಂದೆ ಬಿದ್ದಿದ್ದೀಯ?’
‘ಅದು ತುಂಬ ಹಳೆಯದಾಗಿದೆ ಕಣೆ. ಬದಲಾಯಿಸು. ಬೇಕಿದ್ರೆ ನಾನೇ ಸುನಿಲ್ ಶೆಟ್ಟಿಯ ಚಂದದ ಫೋಟೊ ಇರುವ ವಾಲ್ ಪೇಪರ್ ತಂದು ಕೊಡ್ತೇನೆ.’
‘ಹೋಗಲೋ, ಸುನಿಲ್ ಶೆಟ್ಟಿಯ ಈ ಫೋಟೊ ಬಿಟ್ಟು ಬೇರೆ ಫೋಟೊ ನಂಗೆ ಇಷ್ಟ ಆಗಲ್ಲ. ಇದರಲ್ಲಿ ನೋಡು, ಅವನ ಕಣ್ಣು, ತುಟಿ, ಸ್ವಲ್ಪ ತೆಗೆದಿರುವ ಬಾಯಿ… ಎಷ್ಟು ಅಮಾಯಕನ ಹಾಗೆ ಕಾಣ್ತಾನೆ. ಆದರೂ ಎಷ್ಟು ಸೆಕ್ಸಿ.’
‘ಥೂ ಅವನನ್ನು ಸೆಕ್ಸಿ ಅಂತಿಯಲ್ಲೇ ಗುಗ್ಗೂ’
‘ನೋಡು, ನಂಗೆ ಸುನಿಲ್ ಶೆಟ್ಟಿ ತುಂಬ ಇಷ್ಟ. ನನ್ನ ಮೊದಲ ಕ್ರಶ್ ಅವನು. ನೀ ಸುಮ್ನೆ ರೇಗಿಸಬೇಡ.’

ಅವಳು ಎದ್ದು ಹೊರಟಳು. ಆತ ತೀರಾ ಸಂದಿಗ್ಧಕ್ಕೆ ಬಿದ್ದವನಂತೆ ಕುಳಿತು ಬಿಟ್ಟ.

ಕೆಲವು ದಿನಗಳ ಹಿಂದಿನಿಂದಲೂ ಅವನು ಬೈಂಡ್ ಚೇಂಜ್ ಮಾಡು ಎನ್ನುತ್ತಲೇ ಬಂದಿದ್ದ. ಆತ ಹಾಗೆ ಹೇಳಿದಾಗಲೆಲ್ಲ ‘ನಿನ್ನ ಕಣ್ಣೇನು ಮಂದಾಗಿದೆಯಾ? ಇಷ್ಟು ಚಂದ ಇರುವ ಕವರ್ ತೆಗಿ ಅಂತಿಯಲ್ಲೋ.’ ಎಂದು ರೇಗುತ್ತಿದ್ದಳು.
‘ನನಗೆ ಸುನಿಲ್ ಶೆಟ್ಟಿ ಅಂದರೆ ತುಂಬ ಇಷ್ಟ. ನನ್ನ ಹೀರೊ ಅವನು.’ ಎಂದಿದ್ದಳು ಪುಟ್ಟ ಕಣ್ಣನ್ನು ದೊಡ್ಡದಾಗಿಸಲು ಪ್ರಯತ್ನಿಸುತ್ತ.

 


ಒಂದುದಿನ ಗಡಿಬಿಡಿಯಿಂದ ಬಂದವನು ‘ನಾನು ನಿನ್ನೆ ಕಾಲೇಜಿಗೆ ಬಂದಿರಲಿಲ್ಲ. ನಿನ್ನ ಇಂಗ್ಲೀಷ್ ನೋಟ್ಸ್ ಕೊಡೆ. ನಾಳೆ ತಂದುಕೊಡ್ತೆ.’ ಅಂದಿದ್ದ.
‘ಹೋಗೋ ನಿನ್ನ ಕಾಲೇಜಿಗೆ ಬರಬೇಡ ಅಂತ ನಾನು ಹೇಳಿದ್ನಾ? ಈಗ ನಾನ್ಯಾಕೆ ನೋಟ್ಸ್ ಕೊಡಲಿ?’ ಮುಖಕ್ಕೆ ಹೊಡೆದಂತೆ ಹೇಳಿದ್ದಳು.

ಅವಳ ಈ ತರಹದ ನೇರಾನೇರ ಮಾತು ಅವನಿಗೆ ತುಂಬ ಇಷ್ಟ. ಅದಕ್ಕೆಂದೇ ಬಹಳ ದಿನಗಳಿಂದಲೂ ಅವಳಿಗೆ ಮನದ ಮಾತು ಹೇಳಬೇಂಕೆಂದು ಕಾತರಿಸುತ್ತಿದ್ದ. ಆತ ಏನಾದರೂ ಸೂಕ್ಷ್ಮವಾಗಿ ಹೇಳಿದಾಗಲೆಲ್ಲ ಅದನ್ನು ಕೇಳಿ ಜೋಕ್ ಎಂಬಂತೆ ದೊಡ್ಡದಾಗಿ ನಕ್ಕು ಬಿಡುತ್ತಿದ್ದಳು. ಹೀಗೆಂದೆ ಒಂದು ಪತ್ರ ಬರೆದು ತಂದಿದ್ದ. ಅದನ್ನು ಕೊಡುವುದಾದರೂ ಹೇಗೆ? ಅದಕ್ಕೆಂದೇ ‘ನೋಟ್ಸ್ ಕೊಡು. ನಾಳೆ ವಾಪಸ್ ಕೊಡುವೆ’ ಎಂದು ವರಾತೆ ಹಚ್ಚಿದ್ದ. ಅಂತೂಇಂತೂ ಇನ್ನೇನು ಕಾಲಿಗೆ ಬೀಳುವುದೊಂದನ್ನು ಬಾಕಿ ಉಳಿಸಿಕೊಂಡು ನೋಟ್ಸ್ ನೀಡಿದ್ದಳು.

ಏನು ನೋಟ್ಸ್ ಬರೆದುಕೊಂಡನೋ ಏನು ಓದಿದನೋ ಅಂತೂ ಇಡಿ ರಾತ್ರಿ ತನ್ನ ಪ್ರೇಮಪತ್ರ ಎಲ್ಲಿಡಲಿ ಎಂದು ಯೋಚಿಸುತ್ತಲೇ ಕಳೆದಿದ್ದ. ನೋಟ್ ಬುಕ್ ನ ಮಧ್ಯದಲ್ಲಿಟ್ಟರೆ ಎಲ್ಲಾದರೂ ಬಿದ್ದು ಹೋದರೆ? ಯಾರಾದರೂ ಬೇರೆಯವರ ಕೈಗೆ ಸಿಕ್ಕರೆ ಎನ್ನುವ ಆತಂಕ ಮುಗಿಸಿ ನೋಟ್ ಬುಕ್ ನ ಬೈಂಡ್ ಒಳಗೆ ಇಡುವುದು ಎಂದು ತೀರ್ಮಾನಿಸಿ, ನಾಜೂಕಾಗಿ ಬೈಂಡ್ ತೆಗೆದು ಉಬ್ಬು ಕಾಣದಂತೆ ಇಟ್ಟು ಮಲಗುವಾಗ ಬೆಳಗಿನ ಜಾವ ಮೂರು ಗಂಟೆಯಾಗಿತ್ತು.

ಮರುದಿನ ಬೆಳಿಗ್ಗೆ ಅವಳ ಕೈಗೆ ನೋಟ್ ಬುಕ್ ಇಡುವವರೆಗೆ ಅವನು ಅನುಭವಿಸಿದ ತಲ್ಲಣ ದೇವರಿಗೇ ಪ್ರೀತಿ. ಅವಳೋ ಇವನ ಆತಂಕದ ವಿಷಯವೇ ಅರಿವಿರದವಳು. ‘ಯಾಕೋ? ತುಂಬ ಸ್ಟೈಲ್ ಆಗಿ ಬಂದಿದ್ದೀಯಾ? ಹೊಸ ಶರ್ಟ್? ಬರ್ತ್ ಡೇನಾ ನಿಂದು?’ ಎಂದಿದ್ದಳು. ಅಷ್ಟಾದರೂ ಗುರುತಿಸಿದಳಲ್ಲ ಎಂದು ಹಿಗ್ಗಿ ಹೀರೇಕಾಯಿ ಆಗಿದ್ದ.
ಮಾರನೆಯ ದಿನದಿಂದ ಅವಳ ಮುಖ ಗಮನಿಸುವುದೇ ಕೆಲಸ ಇವನಿಗೆ. ತನ್ನ ಮುಖ ಕಂಡಾಕ್ಷಣ ಏನಾದರೂ ಮುಖಭಾವ ಬದಲಾಗುತ್ತದೆಯೋ ಎಂದು ಕಾಯುತ್ತಿದ್ದ. ಅವಳೋ ಸಂತೆಯಲ್ಲಿ ಇವನೊಬ್ಬ ಎಂಬಂತೆ ನಡೆದು ಬಿಡುತ್ತಿದ್ದಳು. ಎರಡು ದಿನಗಳಾದವು, ನಾಲ್ಕಾಯ್ತು, ವಾರವೂ ಕಳೆಯಿತು. ಎರಡು ವಾರವೂ…. ಅವಳಲ್ಲಿ ಯಾವ ಬದಲಾವಣೆಯೂ ಕಾಣುತ್ತಿಲ್ಲ. ತಾನು ಬೈಂಡ್ ಒಳಗಿಟ್ಟು ತಪ್ಪು ಮಾಡಿದೆನೇನೋ, ಅವಳು ಅದನ್ನು ನೋಡಿರಲಿಕ್ಕಿಲ್ಲ ಎಂದು ಅನ್ನಿಸತೊಡಗಿತು. ಹೀಗಾಗಿ ಆ ನೋಟ್ ಬುಕ್ ನ ಕವರ್ ಹೊಲಸಾಗಿದೆ ಬದಲಿಸು ಎಂದು ಹೇಳತೊಡಗಿದ್ದ. ಅವಳು ಬೈಂಡ್ ಬದಲಿಸುವಾಗಲಾದರೂ ತನ್ನ ಪ್ರೇಮಪತ್ರ ಕಣ್ಣಿಗೆ ಬೀಳಬಹುದು., ಓದಿ ಅವಳು ಒಪ್ಪಿಕೊಳ್ಳಬಹುದು ಎನ್ನುವ ದೂರಾಲೋಚನೆ. ಆದರೆ ಅವಳಿಗೆ ನೋಟ್ ಬುಕ್ ನ ಕವರ್ ಬದಲಿಸಲು ಎಳ್ಳಷ್ಟೂ ಒಪ್ಪುವುದಿಲ್ಲ ಎಂದು ಖಚಿತವಾಗತೊಡಗಿತ್ತು.


ಒಂದುದಿನ ‘ಎಷ್ಟು ಅಂತ ಒದ್ದಾಡುವುದು? ಡೈರೆಕ್ಟ್ ಆಗಿ ಹೇಳಿಬಿಡುವುದೆ ವಾಸಿ’ ಅಂದುಕೊಂಡವನು ಲೈಬ್ರರಿಯ ಎದುರಿನ ಚಿಕ್ಕ ಕಾಡಿನ‌ಹುಲ್ಲು ಹಾಸಿನ ಮೇಲೆ ಅವಳು ಹಾಗೂ ಅವಳ ಗೆಳತಿ ಕುಳಿತತ್ತ ಹೆಜ್ಜೆ ಹಾಕಿದ. ಅವರಿಬ್ಬರೂ ಅದೇನೋ ಗಹನವಾದ ಚರ್ಚೆಯಲ್ಲಿದ್ದರು. ವಿಷಯ ಪ್ರೀತಿಸುವ ಕುರಿತಾದದ್ದು ಎಂದು ತಿಳಿದದ್ದೇ ಉತ್ಸುಕತೆಯಿಂದ ಅವರ ಜೊತೆ ಕುಳಿತು ‘ಏನು ಗಂಭೀರ ಚರ್ಚೆ ನಡಿತಿದೆ? ನಾನೂ ಸೇರಿಕೊಳ್ಳಲಾ?’ ಎಂದ.
‘ನೋಡು, ಕೆಲವರು ಸ್ನೇಹಿತರ ತರಹ ಇರ್ತಾರೆ. ಆದರೆ ಮನದೊಳಗೆ ಪ್ರೀತಿಸುವ ಬಯಕೆ ತುಂಬಿರುತ್ತದೆ. ಅಂಥವರನ್ನು ಕಂಡರೆ ನನಗೆ ಅಸಹ್ಯವಾಗುತ್ತದೆ ಎಂದೆ ಆದರೆ ಇವಳು ಅದು ತಪ್ಪಲ್ಲ ಅಂತಿದ್ದಾಳೆ. ನೀನೇ ಹೇಳು. ಒಳ್ಳೆಯ ಸ್ನೇಹಿತರು ಅಂದುಕೊಳ್ಳುತ್ತಲೆ ಪ್ರೀತಿಗೆ ಪ್ರಸ್ತಾಪ ಇಡೋದು ನಂಬಿಕೆ ದ್ರೋಹ ಅಲ್ವಾ? ಅಂಥವರ ಗೆಳತನವನ್ನೂ ಇಟ್ಕೋಬಾರದು’ ಎಂದಳು.
ಈತ ಮತ್ತೆ ತಡಬಡಾಯಿಸಿದ. ‘ಹೌದೌದು…’ ‘ಅಲ್ಲಲ್ಲ…’ ಅಂತೆಲ್ಲ ಹೇಳಿದ. ‘ನಿಂಗೇನಾಯ್ತೋ? ಹೀಗೆ ಬೆಬ್ಬೆಬ್ಬೇ ಅಂತೀಯಲ್ಲೋ? ಎಂದಳು.
ನಿನ್ನ ಇಂಗ್ಲೀಷ್ ನೋಟ್ಸ್ ಕೊಡೆ. ಸ್ವಲ್ಪ ಬಾಕಿ ಇತ್ತು.’ ಸಣ್ಣ ದ್ವನಿಯಲ್ಲಿ ಕೇಳಿದ.‌ ‘ಹೋಗೋ. ನಾಡಿದ್ದು ಟೆಸ್ಟ್ ಮಾಡ್ತಾರಂತೆ. ನನಗೆ ಬೇಕು.’ ಒಂದೇ ಮಾತಿಗೆ ನಿರಾಕರಿಸಿಬಿಟ್ಟಳು. ‘ಇಲ್ಲೇ ಲೈಬ್ರರಿಯಲ್ಲಿ ಕುಳಿತು ಬರ್ಕೊಡ್ತೀನಿ. ಅರ್ಧ ತಾಸು ಅಷ್ಟೇ.’ ಅಂಗಲಾಚತೊಡಗಿದ. ‘ಅಯ್ಯೋ ಅಷ್ಟಕ್ಯಾಕೆ ಅಳು ಮೂತಿ ಮಾಡ್ತಿ. ಬೇಗ ಬರೆದು ಕೊಡು.’ ಆಕೆ ಕರುಣೆ ತೋರಿ ಇಂಗ್ಲೀಷ್ ನೋಟ್ಸ್ ತೆಗೆದು ಕೊಟ್ಟಳು. ನಿಧಿಯೇ ಸಿಕ್ಕಂತೆ ಲೈಬ್ರರಿಯೊಳಗೆ ಹೋದವನು ಇಪ್ಪತ್ತೇ ನಿಮಿಷಕ್ಕೆ ನೋಟ್ಸ್ ಹಿಂದಿರುಗಿಸಿ ‘ಥ್ಯಾಂಕ್ಸ್ ಕಣೆ. ತುಂಬಾ ಹೆಲ್ಪಾಯ್ತು.’ ಎಂದ. ಹಿಂದಿರುಗಿ ಹೊರಟವನ ಕಣ್ಣಲ್ಲಿ ಕಂಡೂ ಕಾಣದಂತೆ ನೀರಿನ ಪಸೆಯಿತ್ತು. ಕಿಸೆಯೊಳಗಿಟ್ಟ ಪ್ರೇಮಪತ್ರದ ಭಾರಕ್ಕೆ ಮುಗ್ಗರಿಸುವಂತಾಗುತ್ತಿತ್ತು.
ಇತ್ತ, ಆತ ಅತ್ತ ತಿರುಗಿದ್ದೇ ಬೈಂಡ್ ತೆಗೆದು ನೋಡಿದ ಗೆಳತಿಯರಿಬ್ಬರ ಮುಖದಲ್ಲೂ ನಸುನಗುವಿತ್ತು. ಆತನೇ ತನ್ನ ಪತ್ರ ತೆಗೆದುಕೊಂಡು ಹೋಗುವಂತೆ ಮಾಡಿದ ತಮ್ಮ ಹದಿನೈದು ದಿನಗಳ ಮುಗ್ಧತೆಯ ನಟನೆಗೆ ತಮ್ಮ ಬೆನ್ನನ್ನು ತಾವೆ ತಟ್ಟುಕೊಳ್ಳುವಂತೆ ಮುಸಿನಗುತ್ತಿದ್ದರು ಇಬ್ಬರೂ.

+2

One thought on “ಮುಚ್ಚಿಟ್ಟ ಪ್ರೇಮಪತ್ರದ ಗುಟ್ಟು..ಶ್ರೀದೇವಿ ಕೆರೆಮನೆಯವರ ಬರಹ

Leave a Reply

Your email address will not be published. Required fields are marked *

error: Content is protected !!