ಯಾರು ಯಾರಿಗಾಗಿ ಕಾಯಬೇಕು? ಶಿವಲೀಲಾ ಹುಣಸಗಿಯವರ ಬರಹ

ಎಂಥಹ ಭೂಕಂಪನಗಳಾದರೂ ಭೂಮಿಯ ಅಸ್ಮಿತೆ ಅಸ್ಥಿರ ಬದುಕಿಗೆ ಆಗಾಗ ಕಂಪನದ ಅಲೆಗಳನ್ನು ಸೃಷ್ಟಿಸುತ್ತೆ.ಚಿಂತನೆಗಳು ಬುಡಮೇಲು ಮಾಡುವುದಕ್ಕೆ ಇಷ್ಟು ಸಾಕು. ಊಹಿಸಿದ ಲೆಕ್ಕಾಚಾರಗಳು ಮನದಲ್ಲಿ ಹಿಡಿದಿಡಲು ಕ್ಯಾಮರಾದಂತೆ ಪ್ರಯತ್ನ ಪಟ್ಟು ಕ್ಲಿಕ್ಕಿಸಿ ಸೋತಾಗಲೇ ಅರಿವಾಗುವುದು, ಪೆಚ್ಚಾಗಿ ನಿಂತ ನಿಶ್ಯಬ್ದ ಕಂಗೆಟ್ಟಿದೆಯಂತ. ಯಾರೋ ನೆನೆದರೆಂದು ಬಿಕ್ಕುವ ಬಿಕ್ಕಳಿಕೆಗಳ ಸದ್ದು ಶಶಿರ ಋತುವಿನಲ್ಲಿ ಉದುರುವ ತರಗಲೆಗಳಂತೆ.ಮೌನವಾಗಿ ಧರೆಯತ್ತ ಹಗುರಾಗಿ ಗಾಳಿಗುಂಟ ಅಸ್ಥಿರತೆಯನ್ನು ಹರವಿ ಒರಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಮನಸೋ ಇಚ್ಚೆ ಪಡೆದುದೆಲ್ಲವು ಕರಗಿ ನೀರಾಗಿ ನುಣುಚಿಕೊಳ್ಳಲು ಒದ್ದಾಡುವ ಭಾವ ತೀವ್ರತೆಗೆ ಉತ್ತರವಿಲ್ಲ.

ಯಾರು ಯಾರಿಗಾಗಿ ಕಾಯಬೇಕು? ಯಾಕಾಗಿ ಕಾಯಬೇಕು? ಕಾದ ಪ್ರತಿಫಲ ಹಣ್ಣೋ ಕಾಯೋ ಗೊತ್ತಿಲ್ಲ.ಕಾಯವಿಕೆಯ ಅರ್ಥ ಶತಮಾನಗಳಿಂದಲೂ ಬಗೆಹರಿಯದ ಯಾತ್ರೆಯನ್ನು ಮುಗಿಸಿದಂತೆ.ಏನೋ ಮನಸ್ಸಿಗೆ ಸಮಾಧಾನ ಅಷ್ಟೇ.ಶಶಿಯೆಂದಿಗೂ ಸ್ವಯಂ ಪ್ರಕಾಶವಿರದವನೆಂಬ ನೈಜತೆ ಬಲ್ಲವರಾದರೂ, ಬೆಳಕ ಎರವಲಾಗಿ ಪಡೆದು ಹಂಚಿದ್ದು ತಿಂಗಳ ಪ್ರಾಮಾಣಿಕ ಗುಣವಲ್ಲದೆ ಮತ್ತೇನು? ಇಂದಿಗೂ ಹಾಲ್ನೋರೆಯ ಬೆಳದಿಂಗಳು ಮನದಲ್ಲಿ ನೆಲೆಸಿ,ಆಗಾಗ ಮನತಣಿಸಿದೆ ನನಗೊಮ್ಮೆ ಅನಿಸಿದ್ದಿದೆ.ಮುಖಭಾವದ ಹಿಂದೆ ಮೆತ್ತಿದ ಬಣ್ಣದ ಲೇಪನವನ್ನು ಕಿತ್ತೊಗೆದು,ಪ್ರಾಂಜಲ ಮನದಿ ಬೆಳಗುವಷ್ಟು ಮನಸ್ಸು ಇಂದು ಪಕ್ವವಾಗಿದೆಯೇ? ಮುಖಸ್ತುತಿಯ ಕಲಬೆರೆಕೆಯ ಜಮಾನಾದಲ್ಲಿ ಸತ್ಯ ಉಡುಗಿ ಮಿಥ್ಯ ಮಿನುಗುತ್ತಿರುವುದನ್ನು ಕಂಡು ಕಾಣದಂತೆ ನಾವುಗಳು ಇರಲೇಬೇಕನ್ನುವುದು ಒಪ್ಪಲೇ ಬೇಕು.

ನಂಬಿಕೆಯ ಅರಮನೆ ಅರಗಿನದಾದರೆ ಗತಿಯೇನು? ಮನೋವಿಕಾರಗಳು ಮನತಣಿಸಲು ಹೊಯ್ದಾಡಿ ಕೊನೆಗೆ ಅಸುನೀಗುವ ಪರಿಕಲ್ಪನೆಗೆ ಆಶ್ಚರ್ಯವಿಲ್ಲ. ಮುಖವಾಡಗಳ ಜಾಡು ಹಿಡಿದು ಹೊರಟಾಗೆಲ್ಲ ಹುಸಿ ಬಿಂಬಗಳು.ಕಾಟಾಚಾರಕ್ಕೆ ಹಲ್ಲಕಿರಿಯುವ ಮಂಗ್ಯಾನ ಮುಸುಡಿಯಂತೆ.ನಾಟಕೀಯ ನಟನೆ,ಘಟನೆಗಳು ವಿಸ್ಮಯದ ಮುಖಪುಟವೆಂದರೆ ತಪ್ಪಾಗದು.

ಸಾವಿರ ಋತುಗಳನ್ನು ಕಂಡ ಪ್ರಕೃತಿಗೆ ಈಗೀಗ ಎಲ್ಲವು ಅಗೋಚರಗಳ ಗೂಡಾಗಲು ಸಾಧ್ಯವಿಲ್ಲ.ಅದಕಾಗಿ ಚಿಂತಿಸುವ ಅಗತ್ಯವು ಇಲ್ಲ.ಮಹಾಪುರುಷರು,ತತ್ವ ಜ್ಞಾನಿಗಳು ಅವತಾರವೆತ್ತಿ ತಮಗನಿಸಿದ್ದನ್ನು ತಾವು ಕಂಡದ್ದನ್ನು,ತಮ್ಮ ಅನುಭವದ ಆಧಾರದ ಮೇಲೆ ಇತರರಿಗೆ ನಿಸ್ಸಂಕೋಚವಾಗಿ ಹೇಳಿಹೋದರೆಂಬ ಸತ್ಯ ಇತಿಹಾಸದ ಪುಟಗಳಲಿ ದಾಖಲಾಗಿದ್ದನ್ನು ಇಂದಲ್ಲ ನಾಳೆ ಕಣ್ಮುಂದೆ ಅನಾವರಣವಾಗದೇ ಇರದು.

ಅವನೊಬ್ಬ ತಿರುಕ,ಭಿಕ್ಷಕ ಅವನನ್ನು ನೋಡಿದರೆ ಹೇಸಿಗೆ ಪಟ್ಟುಕೊಳ್ಳುವವರೇ,ಅವ ಇರುವುದು ಹಾಗೆಯೇ…ತಿರುಕನ ಕನಸು ನನಸಾಗದಿದ್ದರೂ ಇವನ ಬಳಿ ಅಥವಾ…ಇವನ ಸ್ಪರ್ಶದ ಮೂಲಕ ಕಂಡ ಕನಸುಗಳು ಗರಿ ಬಿಚ್ಚಿ ನಲಿದಂತೆ.ಸಂಕಷ್ಟ ದೂರಾದಂತೆ.ನಿಜವೇ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಂಡ ಸಾವಿರಾರು ಜನರು.ಇಂತಹ ಪವಾಡ ಪುರುಷರು ಆಗುಹೋದ ಕಥೆಯನ್ನು ಕೇಳಿದರೂ ಅಥವಾ ಅದರ ಬಗ್ಗೆ ತೀಕ್ಷ್ಣವಾದ ವಿಮರ್ಶೆಗೆ ಅವಕಾಶ ನೀಡದೆ ಮುಂದೆ ಸಾಗುವ ಪರಿ ಇಂದಿಗೂ ಪ್ರಸ್ತುತ.

ಎಲ್ಲವೂ ಸುಲಭ ಹಾಗೂ ಕೈಗೆಟುಕುವಂತಿದ್ದರೆ ಖುಷಿ.ಇಲ್ಲವಾದರೆ ಮಾನಸಿಕ ತೊಳಲಾಟ.ಅಲ್ಲ ಸಲ್ಲದ ಮನೋವಿಕಾರಗಳು ಮೈಗೂಡಿಸಿಕೊಂಡು ಕೆಲಸಬಗಸಿ ಬಿಟ್ಟು ‌ಹಿಂದೆ ಅಲೆಯುವ ಕಾಯಕಕ್ಕೆ ಹೆಚ್ಚು ಒತ್ತು ನೀಡುವ ಸ್ಥಿತಿ ಭಯವನ್ನು ಸೃಷ್ಟಿಸುತ್ತೆ. ಅವ್ವ ಯಾವತ್ತೋ ಹೇಳಿದ ಸಂಗತಿಗಳು ಕುತೂಹಲ ಕೆರಳಿಸಿದ್ದಂತೂ ಸತ್ಯ.ನಮ್ಮನ್ನು ಮಲಗಿಸಲು ಹೇಳುತ್ತಿದ್ದ ಕಥೆಗಳು ಕೇವಲ ಉಹಾಪೂಹಗಳಲ್ಲ. ನೈಜವಾದ ಘಟನೆಗಳು ಘಟಿಸಿ ಅದಕೆ ಸಾಕ್ಷಿಯಾದವರು ಕಣ್ಮುಂದೆ ಇರುವಾಗ ಆಶ್ಚರ್ಯದ ಜೊತೆಗೆ ದುಃಖ ಕೂಡ.ನಮಗಂಥಹ ಅಗೋಚರ ಶಕ್ತಿ ಹೊಂದಿದ ಮಹಾತ್ಮರ ನೋಡುವ ಭಾಗ್ಯ ಸಿಗಲಿಲ್ಲವೆಂಬ ನೋವು.

ನಮ್ಮವ್ವ,ಅವರವ್ವ ಅವರ ದರ್ಶನ ಮಾಡಿದ್ದನ್ನು ಹೇಳುವಾಗ ಕಣ್ಣಗಲಿಸಿ ನೋಡಿದ್ದುಂಟು..ಅವರ ಛಾಯಾಚಿತ್ರ ನನ್ನ ಕಂಗಳಿಗೂ ವರ್ಗಾವಣೆ ಆಗಲೆಂದು
ಬೇರಾವ ಧಾರ್ಮಿಕ ಚಿಂತನೆಯು ಬೇಡ…ಮನಸ್ಸು ಪರಿಶುದ್ಧವಾಗಿರಬೇಕು.ನೋಡುವ ದೃಷ್ಟಿ ಪಕ್ವವಾಗಿರಬೇಕು.ಅದೃಷ್ಟ ಒಮ್ಮೆ ಬಾಗಿಲ ತಟ್ಟತ್ತೆ. ಅದು ಅನಾಯಾಸವಾಗಿ ನಿಮ್ಮೆದುರು ಬಂದು ನಿಂತಾಗ ಗುರುತಿಸದೆ ಕುರುಡನಾದರೆ,ಅವಹೇಳನದ ಮಾತುಗಳಾಡಿದರೆ,ತನ್ನ ಕಾಲ ಮೇಲೆ ತಾನೆ ಕಲ್ಲೆತ್ತಿಕೊಂಡಂತೆಯೇ ಸರಿ.

ಒಲಿದವಗೆ ದಕ್ಕಿದಷ್ಟು….ಕನಸು ನನಸಾಗಲು ಸ್ವಯಂ ಪ್ರಯತ್ನವೂ ಇರಬೇಕು.ಸಾವಿರ ಶ್ರಮ ನಿನ್ನದಾದರೂ ಫಲ ಒಂದು ಕಣದ ಗುಲಗಂಜಿಯಲ್ಲಿ ಅಡಗಿದೆ.ಅದು ದೈವಿ ಕೃಪೆ.ಆ ಕೃಪೆ ಯಾರ ಮುಖಾಂತರ ನೆರವೇರುವುದೋ‌ ಬಲ್ಲವರಾರು? ಮುಖಗಳು ಭಿನ್ನ, ಕರ್ತವ್ಯ ಕೂಡ ಭಿನ್ನ.ಅವರವರ ಕರ್ಮಫಲಕ್ಕೆ ತಕ್ಕ ಪ್ರತಿಫಲ ಪ್ರಾಪ್ತಿಯಾಗುತ್ತದೆ. ಹಿರಿಯರು ಆಗಾಗ ನಮಗೆ ಹೇಳಿಕೊಟ್ಟ ಮಾತಿದು…ಹಾಗಾದರೆ ಆ ಮಹಾ ಪುರುಷರು ಯಾರಿರಬಹುದು? ಎಂಬೆಲ್ಲ ಭಾವಕ್ಕೆ ಉತ್ತರ ಕರ್ನಾಟಕದವರ ದೈವ..ಲಡ್ಡೂ ಮುತ್ಯಾ ಚಿರಪರಿಚಿತ ಹೆಸರು.ಹಳ್ಳಿಯ ಸೊಗಡು, ನಮ್ಮ ಸುತ್ತ ಮುತ್ತ ಇದ್ದು ಇಲ್ಲದಂತಾಗಿ ಇವರಾ ಎಂದು ಕೈ ಹೊಸಕಿಕೊಳ್ಳುವ ಪರಿಣಾಮವಾಗಿ ಲಭಿಸುವುದು ಏನು ಇಲ್ಲ.ಅವರ ದರ್ಶನಕ್ಕಾಗಿ ಕಾದು ಕೂರುವ ನಿಖರವಾದ ಜಾಗವಿಲ್ಲ.ಅವರು ಯಾವಾಗ ಎಲ್ಲಿರುವರೋ ಗೊತ್ತಿಲ್ಲ.ಬಟ್ಟೆಯಿಂದ ಅವರ ಗುಣವ ಅರಗಿಸಿಕೊಳ್ಳಲಾಗದು.ಅದೃಷ್ಟದ ಭಿಕ್ಷಾರ್ಥಿ ಅವನಿಗೆ ಅಡೆತಡೆಗಳು ಇಲ್ಲವೇ ಇಲ್ಲ.ಅವ ನುಗ್ಗಿದ್ದಲ್ಲಿ ಜಾತ್ರೆ… ಅವರಿಗಾಗಿ ಕಾದು ಕುಂತವರ ಮನೆಯ,ಅಂಗಡಿಯ ಬಾಗಿಲಿಗೂ ಸುಳಿಯದವ.ತನಗನಿಸಿದವರ ಮನೆಯ ಹೊಕ್ಕು ಕೈಗೆ ಸಿಕ್ಕ ರೊಟ್ಟಿ,ಶೇಂಗಾ,ಲಡ್ಡು ಇತ್ಯಾದಿ ತಿಂಡಿಗಳನ್ನು ತಿನ್ನುತ್ತ ಹೊರಹೋಗುವಾಗ ಚಲ್ಲಿದ ಆಹಾರ ಪದಾರ್ಥಗಳನ್ನು ಬಡಕೊಂಡು ಆಯ್ದು ಕೊಂಡು ತಿನ್ನುವರು ಪ್ರಸಾದವೆಂದು.ರೋಗರುಜಿನವು ಮಾಯ! ಯಾವ ಮನೆಯಿಂದ ಹೊರಬಂದನೋ‌ ಆ ಮನೆಯ ದಾರಿದ್ರ್ಯ ಕಳೆದು ಸುಖದ ದಿನಗಳು ಪ್ರಾರಂಭವಾದ ಘಟನೆಗಳು ನಂಬಲರ್ಹ….ಅವರ ಪವಾಡಗಳು ಸಿನಿಮಾ ಕೂಡ ಆಗಿರುವುದು ಇದಕ್ಕೆ ನಿದರ್ಶನ…ವ್ಯಕ್ತಿ ಅದೃಷ್ಟದ ಚಿನ್ಹೆಯಾಗಿ ಪರಿವರ್ತನೆ ಆಗಿದ್ದು ಹೇಗೋ ಭಗವಂತನೇ ಬಲ್ಲ….

 

+14

18 thoughts on “ಯಾರು ಯಾರಿಗಾಗಿ ಕಾಯಬೇಕು? ಶಿವಲೀಲಾ ಹುಣಸಗಿಯವರ ಬರಹ

 1. ತುಂಬಾ ಸುಂದರ ಲೇಖನ ರೀ ಮೇಡಂ 🌷🙏🏻. ಸುಪ್ತ ಮನಸ್ಸಿನ ಕೈಗೆ ಸಿಗದ ತಲ್ಲಣಗಳ ಅಕ್ಷರ ಮಾಲೆ ಮಾಡಿರೋದು ತುಂಬಾ ಅಧ್ಭುತ.ತುಂಬಾ ಇಷ್ಟವಾಯಿತು.

  +3
  1. ಭಾವನೆಗಳ ತಲ್ಲಣ ಅಭಿವ್ಯಕ್ತವಾಗಿದೆ ನಿಮ್ಮ ಬರಹದಲ್ಲಿ ಯಾರಿಗಾಗಿ ಕಾಯಬೇಕು ಶೀರ್ಷಿಕೆಯಲ್ಲಿ ಪ್ರಕಟವಾಗಿರುವುದು ನಾನು ಈ ರೀತಿ ಪ್ರತಿಕ್ರಿಯೆ ತೋರಿದ್ದೇನೆ

   0
 2. ನಿಮ್ಮ ಬರಹ ತುಂಬಾ ಚೆನ್ನಾಗಿದೆ ಮೇಡಂ.. ಹೀಗೆ ನಿರಂತರವಾಗಿ ನಿಮ್ಮ ಬರಹ ಮೂಡಿ ಬರಲಿ 💐

  0
 3. ನಿಮ್ಮ ಬರಹ ತುಂಬಾ ಚೆನ್ನಾಗಿದೆ ಮೇಡಂ.. ಹೀಗೆ ನಿರಂತರವಾಗಿ ನಿಮ್ಮ ಬರಹ ಮೂಡಿ ಬರಲಿ 💐

  0
 4. ನಿಮ್ಮ ಬರಹ ತುಂಬಾ ಚೆನ್ನಾಗಿದೆ ಮೇಡಂ..ಹೀಗೆ ನಿರಂತರವಾಗಿ ಮೂಡಿ ಬರಲಿ..

  0
 5. ನಿಮ್ಮ ಬರಹ ತುಂಬಾ ಚೆನ್ನಾಗಿದೆ ಮೇಡಂ.. ಇದು ಹೀಗೆ ನಿರಂತರವಾಗಿ ಮೂಡಿ ಬರಲಿ 💐

  0
 6. ತುಂಬ ಚಂದದ ಬರಹ, ಭಾವನೆಗಳ ಅಲೆಯಲ್ಲಿ ತೇಲಾಡಿದಂತಿದೆ.

  +3
 7. ಶಿವ ದಿನದಿಂದ ದಿನಕ್ಕೆ ಬರಹಗಳ ಪಕ್ವತೆಗೆ ನಿನಗೆ ನೀನೆ ಸಾಟಿ ಎಂಬಂತಾಗಿದೆ. ಪವಾಡ ಪುರುಷರು ಯಾವ ರೂಪದಲ್ಲಾದರೂ ಇರುವರು ಎಂಬುದನ್ನು ಚಂದದ ಅಭಿವ್ಯಕ್ತಿ ಮೂಲಕ ತಿಳಿಸಿದ ತಮಗೆ ಅಭಿನಂದನೆಗಳು ಧನ್ಯವಾದಗಳು‌

  +3
 8. ಅವಧೂತರು ಯಾರು ಯಾರಿಗೂ ಕಾಯುವುದಿಲ್ಲವೆಂಬ ಸತ್ಯ ಲೇಖನ ಓದಿ ಮನದಟ್ಟಾಯಿತು.ಸುಂದರವಾಗಿ ಸರಳವಾಗಿ ಓದಿಸಿಕೊಂಡು ಹೋಗುವ ಬರಹ‌.ಚೆನ್ನಾಗಿದೆ.

  +3
 9. ಮನದ ಭಾವನೆಗಳನ್ನು ಹೇಳಿಕೊಳ್ಳಲು ಯಾರು ಹೇಗೆ ಬೇಕಾದರು ಇರಬಹುದು. ಲೇಖನ ತುಂಬಾ ಚೆನ್ನಾಗಿದೆ ಬರವಣಿಗೆಯ ಶೈಲಿ ಇಷ್ಟವಾಯ್ತು.

  0
 10. ಭಾವನೆಗಳ ಹೊಯ್ದಾಟಗಳು,ಸುಪ್ತಮನದ ಚಿಂನೆಗಳು ನವಿರಾಗಿ ಬಂದಿದೆ.

  +3
 11. ಕಾಯುವಿಕೆಯಲ್ಲಿನ ತವಕ, ತಲ್ಲಣಗಳನ್ನು ಅಕ್ಷರ ಪಾತ್ರೆಯಲ್ಲಿ ಪಾಕ ಮಾಡಿ ಉಣಬಡಿಸುವ ಪರಿ ಅದ್ಭುತವಾದದ್ದು..!

  +2
 12. ಪವಾಡ ಪುರುಷರ ಯಾವಾಗ ಯಾವ ರೀತಿ ಆಗುತ್ತೆ ಎಂಬುದು ಯಾರಿಗೂ ಗೊತ್ತಿಲ್ಲ. ಸದಾ ಪರಿಶುದ್ದ ಮನಸ್ಸು ಇರುವುದರಿಂದ ಅವರ ದರ್ಶನವಾಗಬಹುದು…ಸುಂದರ ಲೇಖನ‌‌

  +2

Leave a Reply

Your email address will not be published. Required fields are marked *

error: Content is protected !!