ಎಷ್ಟಕ್ಕೆ ಕೊಡ್ತೀಯಾ” ಅಮ್ಮನ ಧ್ವನಿ ಬಂದತ್ತ ಕಾಲೇಜಿನ ಪರೀಕ್ಷೆಗೆ ಓದುತ್ತಿದ್ದವನು ಕಿಟಿಕೆಯಾಚೆ ನೋಡಿದೆ. ಅಮ್ಮ ತಳ್ಳುಗಾಡಿಯಲ್ಲಿ ಅವರೆಕಾಯಿ ಮಾರುತ್ತಿದ್ದವನೊಡನೆ ಮಾತನಾಡುತ್ತಿದ್ದಳು.
ಸಂಕ್ರಾಂತಿಯ ಹಬ್ಬವು ಹತ್ತಿರವಾಗುತ್ತಿದ್ದಂತೆಯೇ ಅವರೆ ಕಾಯಿಗಳು ಅಲ್ಲಲ್ಲಿ ಓಡಾಡುವ ತಳ್ಳುಗಾಡಿಗಳಲ್ಲಿ, ಬೀದಿ ಬದಿ ಮಾರುವ ವ್ಯಾಪಾರಿಗಳಲ್ಲಿ, ತರಕಾರಿ ಅಂಗಡಿಗಳಲ್ಲಿ, ಮಾರುಕಟ್ಟೆಗಳಲ್ಲಿ ಎಲ್ಲೆಡೆ ಕಾಣಲಾರಂಭಿಸುತ್ತವೆ. ಅದರ ಘಮಲೇ ಅನನ್ಯ
ಸಂಕ್ರಾಂತಿ ಹಬ್ಬವು ಕೆಲವು ದಿನಗಳಾಗಿತ್ತು. ವ್ಯಾಪಾರಿ “ಕೆ.ಜಿ ಐವತ್ತು ರೂಪಾಯಿ “ ಎಂದನು.
ಅಮ್ಮ “ಅಲ್ಲ, ಹಬ್ಬದ ದಿನಾನೇ ಐವತ್ತು ರೂಪಾಯಿಗೆ ಸಿಗ್ತಾ ಇತ್ತು. ಈಗ ಎಲ್ಲಾ ಕಡೆ ಇಪ್ಪತ್ತು ಮೂವತ್ತು ರೂಪಾಯಿಗೆ ಸಿಗ್ತಾ ಇದೆ. ನಿಂದೇನಪ್ಪಾ ಸ್ಪೆಷಲ್ಲು ?” ಎಂದು ತನ್ನ ಚೌಕಾಸಿಯನ್ನು ಪ್ರಾರಂಭಿಸಿದಳು.
“ಇಲ್ಲಕ್ಕಾ ಅವುಗಳಲ್ಲಿ ಬೀಜಗಳು ಚೆನ್ನಾಗಿರಲ್ಲ. ಇವು ನೋಡಿ ಎಷ್ಟು ಚೆನ್ನಾಗಿವೆ “
“ಇಲ್ಲ ಇಪ್ಪತ್ತು ರೂಪಾಯಂಗೆ ಮಾಡಿ ಎರಡು ಕೆಜಿ ಕೊಡು”
“ಆಗಲ್ಲಕ್ಕ. ಅಷ್ಟಕ್ಕೆ ಬರೋದಿಲ್ಲ ನಲ್ವತ್ತು ರೂಪಾಯಂಗೆ ಕೊಡ್ತೀನಿ”
“ಬೇಡ ಬಿಡು”
“ಮೂವತ್ತು ರೂಪಾಯಂಗೆ ಕೊಡ್ತೀನಿ” ಎಂದು ವ್ಯಾಪಾರಿ ಹೇಳಿದಾಗ. ಅಮ್ಮ ಎರಡು ಕೆಜಿ ಕೊಂಡಳು
ಅಮ್ಮನಿಗೂ.ಅಪ್ಪನಿಗೂ, ತಾತನಿಗೂ, ಅಜ್ಜಿಗೂ ಅವರೆಕಾಳಿನಿಂದ ಏನೇ ಮಾಡಿದರೂ ಬಹಳ ಇಷ್ಟ. ಹಾಗಾಗಿ ಈ ಅವರೆಕಾಳು ಮಾರುಕಟ್ಟೆಯಲ್ಲಿ ಸಿಗುವವರೆಗೂ ಅವರೆಕಾಳು ಉಪ್ಪಿಟ್ಟು, ಅವರೆಕಾಳು ಸಾರು, ಹಿತುಕಿದ ಬೇಳೆ ಸಾರು, ಅವರೆಕಾಳಿನ ಉಸ್ಲಿ, ಅವರೆಕಾಳಿನ ಚಟ್ನಿ, ಅವರೆಕಾಳಿನ ಉಂಡೆ ಇವುಗಳು ತಯಾರಾಗುತ್ತಿದ್ದವು.
“ನವೀನ್ ಬಾರೋ, ಅವರೆಕಾಯಿ ಸುಲಿದು ಕೊಡು” ಅಮ್ಮನ ಮನೆಯೊಳಗೆ ಅವರೆಕಾಯಿ ಚೀಲ ತಂದು ನನ್ನನ್ನು ಕರೆದಳು.
ಅವರೆಕಾಳಿನಿಂದ ಮಾಡಿದ ಖಾದ್ಯಗಳು ನನಗಿಷ್ಟವಾದರೂ ಅದರ ಸಿಪ್ಪೆ ಸುಲಿಯುವ ಕೆಲಸವನ್ನು ಅಮ್ಮ ಹೆಚ್ಚಾಗಿ ನನಗೇ ವಹಿಸುತ್ತಿದ್ದರಿಂದ, ನನಗೆ ಅವರೆಕಾಯಿಯನ್ನು ಮನೆಯಲ್ಲಿ ನೋಡಿದಾಗಲೆಲ್ಲಾ ಮತ್ತೊಂದು ತಲೆ ನೋವಿನ ಕೆಲಸ ಬಂತು ಎಂದುಕೊಳ್ಳುತ್ತಿದ್ದೆ.
ಅವರೆಕಾಯಿಯನ್ನು ಸುಲಿಯುತ್ತಿದ್ದಾಗ ಕೆಲವುಗಳಲ್ಲಿ ಅವರೆಹುಳುಗಳು ಇದ್ದವು ಅಂಥ ಕಾಯಿಗಳನ್ನು ನೋಡಿದ ಕೂಡಲೇ ಇಡೀ ಅವರೇಕಾಯಿಯನ್ನು ಬಿಸಾಡುತ್ತಿದ್ದೆ.
“ಯಾಕೋ ಇಡೀ ಅವರೇಕಾಯೀನ ಬಿಸಾಕ್ತಾ ಇದ್ದೀಯಾ?” ಎಂದು ಅಮ್ಮ ಅಡುಗೆಮನೆಯಿಂದಲೇ ನೋಡಿ ಜೋರಾಗಿ ಕೇಳಿದಳು.
“ಅವುಗಳಲ್ಲಿ ಹುಳ ಇದೇಮ್ಮ, ಅದಕ್ಕೆ ಬಿಸಾಕಿದ್ದೀನಿ”
“ಅವರೆಕಾಯಿಯಲ್ಲಿ ಹುಳುಗಳು ಬರ್ತಾ ಇರುತ್ವೆ ಜೀವನದಲ್ಲಿ ಬರೋ ಹಾಗೆ, ಅದಕ್ಕೋಸ್ಕರ ಇಡೀ ಅವರೆಕಾಯಿಯನ್ನ ಬಿಸಾಕೋಗಾಗಲ್ಲ ಹುಳಗಳನ್ನ ಬಿಸಾಕ ಬೇಕು ಚೆನ್ನಾಗಿರೋ ಅವರೆಕಾಳುಗಳನ್ನ ಉಳಿಸಿಕೋಬೇಕು ಅಷ್ಟೇ ಎಂದು ಬುದ್ದಿಮಾತು ಹೇಳಿದಳು.
ಈ ಅಮ್ಮನಿಗೆ ಈ ಪಾಠವನ್ನೆಲ್ಲಾ ಯಾರು ಕಲಿಸಿದರೋ ಎಂದು ಮರುಮಾತನಾಡದೆ ಮನದಲ್ಲೇ ನಕ್ಕೆ.
ಒಳ್ಳೆಯದನ್ನು ಉಳಿಸಿಕೊಂಡು ಕೆಟ್ಟದ್ದನ್ನು ಹುಳು ಎಸೆದ ಹಾಗೆ ಎಸೆದುಬಿಡಬೇಕು ಅಲ್ಲವೇ ವಿನು