ಮಾಯವಾಗಿದೆ ಮನಸು.. ಶಿವಲೀಲಾ ಹುಣಸಗಿಯವರ ಬರಹ

ಮನಸು ಹತೋಟಿ ಮೀರಿ ಓಡುತ್ತಿದೆ,ಕೈಗೆಟುಕದ ತಾರೆಗಳ ಹಿಡಿಯಲು ಹುಸಿನಗೆಗೂ ಬರ್ಗಲ ಬಂದಂತೆ ತದೇಕ ಚಿತ್ರದಿಂದ ವ್ಯಾಕುಲತೆ ಆವರಿಸಿದಂತಾಗಿ‌ ಮರುಭೂಮಿಯಂತಾಗಿ ಕಂಗೆಟ್ಟಿದೆ.ಭೀಕರ ಕ್ಷಾಮದ ಹೊಣೆ ಹೊತ್ತು ನಿಟ್ಟುಸಿರು ಓಯಾಸಿಸ್ ಹುಡುಕಿದಂ ತಾಗಿತ್ತು.ಯಾಕಾದರೂ ಬೆಳಗಾಯಿತೋ ಬೆಳಕಿನ ಕಿರಣಗಳು ಕಂಗಳ ಪರದೆಯ ಕುಕ್ಕಿ ಎಬ್ಬಿಸಿದಂತಾಗಿ ಕಿಟಕಿ,ಬಾಗಿಲು,ಚಿಲಕಗಳು ಎಲ್ಲವು ಮೌನ ಮುರಿಯಲು ಕಾದುಕುಂತಂತಿದ್ದವು.ಅವಕ್ಕೇನು ಬೇಕು ಅನ್ನೊದು ನನಗೆ ಮಾತ್ರ ಗೊತ್ತು.

ಪ್ರತಿ ವರ್ಷವೂ ಆತ್ಮ ಸಂಧಾನದ ಮೂಲಕ ಶರಣು ಹೋದ ಗಳಿಗೆಗಳು ಇವು.ಸತ್ತು ಸತ್ತು ಹುಟ್ಟಿಬಂದ ಫೀನಿಕ್ಸ್ ಪಕ್ಷಿಯಂತೆ ಕೊರಳೆತ್ತಿ ಮೆರೆದವನ ಕೊರಳ ಹಾರವಾಗಿ ದಣಿದಾಗೆಲ್ಲ,ಅವ ಒಮ್ಮೆಯು ನನ್ನತ್ತ ಓರೆಗಣ್ಣಿಂದ ನೋಡದೆ ಗಲ್ಲ ಸವರಿ ದೂರ ತಳ್ಳಿದವನು ಅದ್ಯಾಕೋ ಮುನಿಸು ಅವಂಗೆ.ಆಯಸ್ಸು ಕಡಿಮೆಯಂತಲೋ ಉಹಿಸಿ ಅರ್ಥೈಸಿಕೊಳ್ಳಲು ಸಮಯ ನನಗಿರಬೇಕಲ್ಲ.ಜಾರು ಬಂಡಿಯ ಹತ್ತಿ ಮೆಲ್ಲನೆ ಕೆಳಗೆ ನೂಕಿದಾನುಭವ! ಬಾಗಿ ಬಂದ ಎದೆಗೆ ಕಲ್ಲೆಟಿನಂತೆ.ಸೊಕ್ಕು ಸುಕ್ಕು ಗಟ್ಟುವ ಮೊದಲು ಎಚ್ಚರವಾದ್ರೆ ಸಾಕೆಂಬ ಚಿಂತನೆ ಮನದೊಳಗೆ.

ಗಡಿಯಾರ ಪ್ರತಿ ಸೆಕೆಂಡಿಗೂ ಸರಿವಾಗಿನ ಸದ್ದು ಎದೆಬಡಿತಕ್ಕಿಂತ ಜೋರಾಗಿ ಬಡಿದುಕೊಳ್ಳುತ್ತ ಭಯ ಹುಟ್ಟಿಸಿತ್ತು.ಅಬ್ಬಾ‌..! ಶುಭರಾತ್ರಿ ನನಗಿಲ್ಲ.ಎಲ್ಲವೂ ಅಶುಭವೇ‌.? ಮಂಜಿನಿಂದ ಆವೃತವಾದ ಚಿಪ್ಪಿನ ಮೇಲೆ ಒಂದು ಹೊಸ ಅಲೆಯ ಹೆಜ್ಜೆಗಳನ್ನು ಇಡಲೆಂಬ ದಿಟ್ಟ ನಿರ್ಧಾರ ಮನದೊಳಗಾದರೂ,ಸೋತಷ್ಟು ಬಾಗುವನೆಂಬ ಹುಚ್ಚು ಭ್ರಮೆ ನನ್ನೊಳಗೆ.ಅದರಗಳ ಅದರುವಿಕೆಗೆ ನೂರು ಅರ್ಥಗಳು.ದೇಹದೊಳಗಿನ ಕಂಪನ ಸಾಮಾನ್ಯವಾದುದಲ್ಲ.ಎಳೆಯ ಕನಸಿಗೆ ಇನ್ನು ರೆಕ್ಕೆ ಬಲಿತಿಲ್ಲ ಗೂಡುಬಿಟ್ಟು ಹಾರಿಹೋಗಲು.

“ಬಂದೆ ಬರುತಾನೆ ರಾಮ,ಬಂದೆ ಬರುತಾನೆ ಬಂದ ಒಡನೆಯೆ ಸೀತೆಯ ಕಂಡು ರಾಣಿ ಎನುತಾನೆ…..ಎಂಬ ವಿರಹ ತುಂಬಿದ,ನೋವು ಮುಗಿಬಿದ್ದು ಸಾವಕಾಣ್ವ ಗಳಿಗೆಗೆ ಅದೊಂದೆ ನಿರೀಕ್ಷೆ.ಆ ಬೆಟ್ಟ ಗುಡ್ಡ ಪ್ರದೇಶದಲ್ಲಿ ಸಂಜೀವಿನಿ ಗಿಡವ ಹುಡುಕಲು ಮಾರುತಿಯ ಬರಮಾಡಿಕೊಂಡರು ಫಲಿಸಿತೇ ಪ್ರೀತಿ?.ಯುಗಗಳು ಉರುಳಿದ್ದು ನಿನ್ನೆ ಮೊನ್ನೆಯಲ್ಲ, ನಿನಗಾಗಿ ಹಂಬಲಿಸಿದ್ದು ಹೊಸತಲ್ಲ.ಆದರೂ ನನ್ನ ನಿನ್ನ ಸಂಬಂಧ ಗಾಳಿಯ ಬಿಸಿಯಲಿ ಅಡಗಿದ ಜಲದಂತೆ.
ಒಲ್ಲೆಒಲ್ಲೆಯೆನ್ನುತಲೇ ಮೋಡಕಟ್ಟಲು ಅಣಿಯಾದವನ ಹಿಡಿದು ನಿಲ್ಲಿಸಲಿ ಹ್ಯಾಂಗೆ? ಮೋಡ ಕರಗಿ ನೀರಾಗುವ ಚತುರತೆಯ ಮೀರದಂತಾಗಿ ಮಾಯವಾದರೆಂಬ ಆತಂಕ.

ಒರಗಿದ ಗೋಡೆಯು ಪಿಸುಗುಟ್ಟಿದಂತಾಗಿ ಅವ ಬಂದನೆಂಬ ದೃಷ್ಟಿ ಬಾಗಿಲತ್ತ? ಯಾವ ಸದ್ದು ಇಲ್ಲ.ಎದ್ದು ದಿಢೀರನೆ ಹಾರಲು ನಾನೇನು ಜಿಂಕೆ ಮರಿನಾ? ಕಾಲವೂರುಳಿದಂತೆ ಆಯಸ್ಸು ಕಡಿಮೆಯಾದರೂ ನೆನಪಿಗುಳಿಯುವ ದಿನವಾಗಿದ್ದಂತು ಸತ್ಯ.ತನ್ನಿಂದ‌ತಾನೆ ತೆರೆದ ಬಾಗಿಲ‌ ದಿಟ್ಟಿಸಿದೆ.ಯಾರೋ ಬಂದ ನೆರಳು..! ಯಾರೆಂದು ಜೋರಾಗಿ ಕೇಳಲು‌ ಆಗದ ಗಂಟಲಿಗೆ ಶಪಿಸಿದೆ.ಬಂದಾದರೂ ಏನು ಮಾಡ್ಯಾರು? ಬಂಗಾರ ಒಡವೆ ವಸ್ತ್ರಗಳನ್ನು ಕದ್ದಾರು ಅಷ್ಟೇ. ನನ್ನೇನು ಮಾಡಲಾಗದು.ಕೈಗೆ ಸಿಕ್ಕರೆ ತಾನೆ? ಹಸಿಹುಸಿನಗೆಯು ಗಹಗಹಿಸಿತ್ತು.

ಯಾವ ನೆನಪನ್ನಾದರೂ ಮರೆಯಬಹುದು…ಮೊದಲ ಪ್ರೇಮದ ಕಥೆ ವ್ಯಥೆಯ ಮರೆಯಲಾದಿತೆ? ಭೂಮಿಗೊಂದು ಇತಿಹಾಸಬರೆದ ಬ್ರಹ್ಮನ ಬ್ರಹ್ಮಾಂಡದ ಚಿಕ್ಕ ಅಣು ನಾನು ನನಗೆಲ್ಲಿದೆ ಅಸ್ತಿತ್ವ. ಅವನೊಲಿದರೆ ತಾನೆ ಕೊರಡು ಕೊನರುವುದು ? ಹಸಿರೆಲೆಯು ಚಿಗುರಲು,ಬಾಯಾರಿದ ಬಾಯಿಗೆ ಉದಕ ಹೊಯ್ಯದೆ ಮರಳ ತುಂಬಿ ನೋವ ಭರಿಸಲಾದಿತೆ? ಎಷ್ಟೊಂದು ಪಿರುತಿ ಇದ್ದರೂ ಹೇಳಲಾರದೇ ಮುಂಗೋಪದ ಕುಡಿಗಣ್ಣನ್ನು ನನ್ನತ್ತ ವಾಲಿಸಿದಾಗಲೂ ಕೋಪವಿಲ್ಲ ಮನದೊಳಗೆ. ಅವನೆಂದರೆ ಪಂಚಪ್ರಾಣ. ಜಗದ ಸೃಷ್ಟಿಕರ್ತನು ನನ್ನೊಳಗೆ ಇಂಗಿಸಿಕೊಳ್ಳಲಾರದೇ ನಿನ್ನೆದೆಗೆ ಚಿಮ್ಮಿರುವ ಕೊರಳ ಉಂಗುರ…

ಹೃದಯವಿದ್ದವರು ಹೃದಯವಂತರೇ….ಸಿಕ್ಕ ಸಿಕ್ಕಲ್ಲಿ, ಮೋಜು,ಮಸ್ತಿಗಳ ಪಾಲಾಗಲೂ ನಾನೆಂದೂ ಹಿಂದೆ ಅಲಿದಿಲ್ಲ.ಹೃದಯ ಕವಾಟಗಳಲಿ ಅವಿತ ನಿನ್ನ ಬಚ್ಚಿಟ್ಟು ಸಾಕಾಗಿದೆ.ಎಲ್ಲಿನಿನ್ನ ಹೊತ್ತೊಯ್ಯುವವರಲ್ಲಿ ಪ್ರೀತಿಯಿಲ್ಲದ್ದು ನಿಜಾನೆ.ಅದು ಬರಿದಾದ ಖಜಾನೆಗೆ ಸಮ.ಮತ್ತದೆ ಮಿಡಿತ..ಢನ್ ಢನ್ ಢನ್ ಪ್ರತಿ ಸದ್ದಿಗೆ ಹರೆಯದ ಛಾಪು ಮೂಡಿದಂತಾಗಿ ಆಗಸದ ತುಂಬ ಬಣ್ಣಬಣ್ಣದ ಪಟಾಕಿಗಳ ಹೂರಣ….ಝಗಮಗಿಸುವ ಬೆಳಕಿಗೆ ಇರುಳು ಮಾಯವಾಗಿತ್ತು.ಬಲೂನುಗಳು ಹೃದಯದ ಆಕೃತಿ ಪಡೆದು ಟಪ್ ಟಪ್ ಸದ್ದಿಗೆ ಆಗಾಗ ಹೊಸ ಬಲೂನುಗಳು ಸೇರ್ಪಡೆಯಾಗುತ್ತಿರುವುದು. ಅವನ ಕಾಣದ ಕೈಚಳಕದ ಪ್ರಭಾವ….

ಏಯ್ ಕುಳ್ಳಿ…ಇವತ್ತು ನನ್ನಾನಿನ್ನ ದಿನ. ಎನ್ ಬೇಕು? ನೀ ಮುಟ್ಡಿದ್ದೆಲ್ಲ ನಿನಗೆ.ಅನ್ನುವವ ಇವನಾ? ಮೂರು ಹೊತ್ತು ನೀ ದೂರ ಇರೆಂದು ವರ್ಷಪೂರ್ತಿ ದೂರ ತಳ್ಳಿ ಈ ಒಂದು ಕ್ಷಣದಲಿ ಮಾತ್ರ ಹತ್ತಿರವಾಗುವವನ ನೋಡಿ ಅಲಿಫ್/ಲೈಲಾ ನಾಚಿರಬೇಕು…ಇಲ್ಲಾ ಸಲಿಂ/ ಅನಾರ್ಕಲಿ ಹೌಹಾರಿರಬೇಕು.ಅದ್ರೂ ಪ್ರೀತಿಯ ಹರಕೆಯ ತೀರಿಸಲು ಬಂದವನಂತೆನಿಸಿ,ಕೊಂಚ ಸಮಾಧಾನ.ಮಳೆಯ ಸಿಂಚನದಿಂದ ಮಣ್ಣಿನ ವಾಸನೆ ಹೃದಯ ತಟ್ಟಿತ್ತು.ಸೋತು ಬಸವಳಿದ ಮನಸಿನ ತಾಣಕೆ ತಂಪೆರದು ಪ್ರೀತಿಯ ಭರವಸೆ ನೀಡಲು ಮುಂದಾದವನ‌ ಕಣ್ಣಲಿ ಕಣ್ಣಿನ ಏಣಿಯಿಟ್ಟು ನೇರವಾಗಿ ಇಳಿಯಬೇಕೆಂಬಾಸೆ.

ಮರಗಿಡಗಳ ಮೇಲೆಲ್ಲಾ…ಪ್ರೇಮದೊಕುಳಿಯ ಪುಷ್ಪವೃಷ್ಟಿ…ಕಂಗಳಲಿ‌ ಕನಸಿನ ಗುಚ್ಛ ತೆನೆಬಾಗಿ ಮುತ್ತಿಟ್ಟಿದೆ.ನಿಶಬ್ದವಾದ ನದಿಯ ನೀರಂತೆ ಜುಳು ಜುಳೆನ್ನುತ.ಸಾಗುವ ಉಸಿರಿಗೆ ಹಸಿರಾಗಬೇಕೆಂಬುದ ಇಂದು ಪೂರೈಸಿ ಬದುಕಿಸಿ ಬಿಟ್ಟೆ.ಹನ್ನೆರಡು ತಿಂಗಳಲಿ ಈ ತಿಂಗಳ ಚಲುವಿಕೆಗಾಗಿ ಈ ದಿನದ ಸ್ವಪ್ನ ಹೆಣೆದು ಆಗಸದಲ್ಲೋ,ಸಾಗರದಲ್ಲೋ,ಶಿಖರದ ತುತ್ತತುದಿ ಯಲ್ಲೋ,ಬೆಟ್ಟಗುಡ್ಡಗಳಲ್ಲೋ ಹೇಳ ಹೆಸರಿಲ್ಲದೆ ಮೈಮರೆವ ಕ್ಷಣಗಣನೆ ಆರಂಭ. “ಪ್ರೇಮವೆಂಬ ಆಗಸವ ಬೊಗಸೆಯಲಿ ಹಿಡಿದಿಡಲು ಶತಪ್ರಯತ್ನ” ದಕ್ಕಿದ್ದು ನಮ್ಮ ಕರ್ಮ ಫಲ.

+10

10 thoughts on “ಮಾಯವಾಗಿದೆ ಮನಸು.. ಶಿವಲೀಲಾ ಹುಣಸಗಿಯವರ ಬರಹ

  1. ಇಂದು ಪ್ರೇಮಿಗಳ ದಿನವಂತೆ ಹಾಗಾಗಿ ಪ್ರೇಮವನ್ನು ಶಾಶ್ವವಾಗಿ ಇಟ್ಟುಕೊಳ್ಳುವವರಿಗೆ ನನ್ನ ಶುಭಾಶಯ. ಕಾರಣ ಈ‌ ಲೇಖನ ಓದಿದಾಗ ಮನಸ್ಸು ಹೇಗಿದೆ?ಮನಸ್ಸು ಯಾಕೆ ಹೀಗೆ ಮಾಡುತ್ತೆ? ನಮ್ಮೊಂದಿಗಿನ ಬಾಂಧವ್ಯ ಹೇಗೆ ಬಯಸುತ್ತೆ? ಎನ್ನುವುದು ಅರ್ಥಮಾಡಿಕೊಳ್ಳಬೇಕಾಗಿದೆ.ಇದು ಮೈ ಮೇಲೆ ಭಾರ ಬಂದು ಇಳಿದು ಹೋದಂತೆ.ಅದಕ್ಕಾಗಿ ಶಾಶ್ವತವಲ್ಲದ ಆಸೆಯ ಬೆನ್ನೇರಿ ಹೋದರೆ ನಾನೊಂದು ತೀರಾ ನೀನೊಂದು ತೀರ… ಹೀಗಿರುವಾಗ ಮನಸ್ಸು ಮಾಯವಾಗದಂತೆ ಎಚ್ಚರ ವಹಿಸುವುದು ಸೂಕ್ತ. ತುಂಬಾನೆ

    +1
  2. ತುಂಬ ಚಂದದ ಬರಹ, ಮಾಯವಾದ ಮನಸ್ಸಲ್ಲಿ ನೆನಪುಗಳ ಹುಡುಕಾಟ.

    +1
  3. Sooooooooper ತಮ್ಮ ಬರವಣಿಗೆ.ಕಣ್ಣು ಓದಿರೋದು , ಮನಸನ್ನು ಮುದಗೊಳಿಸುವ ಸಾಲುಗಳು …. ಓದುತ್ತಾ ಹೋದಂತೆ ಬನಲಿ ತೇಲಿದ ಅನುಭವ…ಸುಪ್ತ ಮನಸ್ಸು ಗರಿಗೆದರಿ ಪುಳಕಿತ ಗೊಂಡ ಮಾಧುರ್ಯ ತೆ ,,, ….

    +2
  4. ಪ್ರೀತಿ ಅಂದ್ರೇನು ಅಂತ ಪ್ರತಿ ಕ್ಷಣ ತಡಕಾಡುವ, ಪ್ರೀತಿಗೆ ಹೊಸ ಹೊಸ ಅರ್ಥ ಹುಡುಕುವ ಮನಸ್ಸಿನ ತುಂಬ ಪ್ರೀತಿಯದೇ ದರ್ಬಾರ ಆದಾಗ ಬದುಕು ಸಾರ್ಥಕ ಅನಿಸೋದು ಸತ್ಯ..! ಪ್ರೀತಿಯಿಲ್ಲದ ಹೃದಯ ಬರಿದಾದ ಖಜಾನೆಯಂತೆ..
    ಪ್ರೀತಿಯ ನವಿರಾದ ಭಾವ ಯಾನದಲ್ಲಿ ಮುನಿಸು ಮೈಲುಗಲ್ಲು ಇದ್ದ ಹಾಗೆ. ಊಟಕ್ಕೆ ಉಪ್ಪಿನಕಾಯಿ ಇದ್ದಂತೆ. ಬದುಕನ್ನು ನೋಡುವ ನಿನ್ನ ದೃಷ್ಟಿಕೋನಕ್ಕೆ ಪ್ರೀತಿಯ ಹ್ಯಾಟ್ಸಾಫ್..!!😍😍😍

    +1
  5. ಪ್ರೀತಿ ಅಂದ್ರೇನೆ ಗೆಳತಿ ಅಂತ ಪ್ರತಿ ಕ್ಷಣ ತಡಕಾಡುವ, ಪ್ರೀತಿಗೆ ಹೊಸ ಹೊಸ ಅರ್ಥ ಹುಡುಕುವ ಮನಸ್ಸಿನ ತುಂಬ ಪ್ರೀತಿಯದೇ ದರ್ಬಾರ ಆದಾಗ ಬದುಕು ಸಾರ್ಥಕ ಅನಿಸೋದು ಸತ್ಯ..! ಪ್ರೀತಿಯಿಲ್ಲದ ಹೃದಯ ಬರಿದಾದ ಖಜಾನೆಯಂತೆ..
    ಪ್ರೀತಿಯ ನವಿರಾದ ಭಾವ ಯಾನದಲ್ಲಿ ಮುನಿಸು ಮೈಲುಗಲ್ಲು ಇದ್ದ ಹಾಗೆ. ಊಟಕ್ಕೆ ಉಪ್ಪಿನಕಾಯಿ ಇದ್ದಂತೆ. ಬದುಕನ್ನು ನೋಡುವ ನಿನ್ನ ದೃಷ್ಟಿಕೋನಕ್ಕೆ ಪ್ರೀತಿಯ ಹ್ಯಾಟ್ಸಾಫ್..!!😍😍😍

    +1
  6. ಮಾಯವಾಗಿದೆ ಮನಸ್ಸು ಬರಹ ತುಂಬಾ ಚೆನ್ನಾಗಿ ಮೂಡಿ ಬಂದಿದೆ.
    ಬದುಕು ಈ ರೀತಿಯಾಗಿಯೂ ನೋಡಬಹುದಲ್ಲ ಎಂದು ನಿನ್ನ ಈ ಸುಂದರ ಬರವಣಿಗೆಯೇ ಸಾಕ್ಷಿ.

    +1
  7. ಇಂದಿನ ದಿನದಲಿ ಈ ತರದ ಪ್ರೀತಿಯ ಅರ್ಥ ಮಾಡಿಕೊಳ್ಳಲು ಪವಿತ್ರ ಮನಸ್ಸು ಬೇಕು.ಚೆನ್ನಾಗಿದೆ.ಮನಸಾರೆ ಇಷ್ಟವಾಯಿತು

    0
  8. ಪ್ರೀತಿ ಯಾವತ್ತು ನಿರ್ಮಲ ಮನಸ್ಸಿಗೆ ಮಾತ್ರ ದಕ್ಕುವುದು.ಅಂತಹ ಪ್ರೀತಿ ದೇವರ ಕರುಣೆಗೆ ಅಸ್ತು ಅನ್ನಿಸುತ್ತದೆ……ತುಂಬಾ ಅದ್ಭುತ ಭಾವ.,.ಭರಿತ ಲೇಖನ.ಗಾಳಿಪಟದಂತೆ ಮನಸ್ಸು ಆಕಾಶದಲ್ಲಿ ಹಾರುತ್ತಿದೆ..ಓದಿದಷ್ಟು ಕಡಿಮೆ…ಚೆಂದ ಬರಹ

    +1
  9. ಪ್ರೀತಿಯನ್ನು ಹಲವು ಬಗೆಯಲ್ಲಿ ಅನಾವರಣಗೊಳಿಸುವ ನಿಮ್ಮ ಶೈಲಿ ಆಕರ್ಷಕವಾಗಿದೆ.

    ಜಯಶ್ರೀ ಹಾಸನ

    +1

Leave a Reply

Your email address will not be published. Required fields are marked *

error: Content is protected !!