ಸುಖದ ಹೊನಲು ಮುಡಿಗೇರಿ.. ಶಿವಲೀಲಾ ಹುಣಸಗಿಯವರ ಬರಹ

ಎಲ್ಲವೂ ನಾವೆಣಿಸಿದಂತೆ ನಡೆದು ಬಿಟ್ಟರೇ ಸುಖದ ಹೊನಲು ಮುಡಿಗೇರಿ ಸಂತಸದ ಕಿರೀಟಧಾರಣೆ ಮಾಡಿದಂತೆಯೇ…ಅದಕೆ ಇರಬಹುದು ಯೋಚಿಸುವ ಮನಸ್ಸು, ಪ್ರೀತಿಸುವ ಹೃದಯ ಶಾಶ್ವತ ಸ್ಥಾನ ಪಡೆಯಲು ಯುಗಗಳಿಂದ ಪ್ರಯತ್ನದ ಮೆಟ್ಟಿಲು ಹತ್ತಲು ಹವಣಿಸುತ್ತಿದೆ.ಕೂಸು ಇದ್ದ ಮನಿಗೆ ಬೀಸಣಿಕೆ ಯಾತಕ? ಎಂಬ ಜಾನಪದ ಹಾಡು ಗುಂಯ್ ಗುಟ್ಟುವಾಗ ತೊಟ್ಟಿಲಂಚಿಗೆ ಒರಗಿ ಬರಿದಾದ ತೊಟ್ಟಿಲ ತೂಗುವಾಗ ಎಚ್ಚರಿಕೆ ಗಂಟೆ ಎದೆಯೊಳಗೆ..ಏನಮ್ಮಾ ನಿನಗ ಬುದ್ದಿ ಬೇಡ್ವಾ? ಖಾಲಿ ತೊಟ್ಟಿಲು ತೂಗಬಾರದು ಒಳ್ಳೆಯದಲ್ಲ.ನಿನ್ನ ಮಡಿಲು ಬರಿದೈತಿ ಅಪಶಕುನ ಸರಿ ಅತ್ಲಾಗೆ,ನೀ ಹಿಂಗ್ ಮಾಡಿದ್ರ ಈ ಮನಿ ಮಕ್ಕಳಿಗೆ ಒಳ್ಳೆಯದಲ್ಲವೆಂದವರು ಸುಮ್ಮನೆ ಹೇಳಿದರೋ, ಹೊಟ್ಟೆಕಿಚ್ಚಿಗೆ ಹೇಳಿದರೋ ಗೊತ್ತಿಲ್ಲ.ಒಟ್ನಲ್ಲಿ ನೋವಂತು‌ ಆಗಿದ್ದು ಹೌದು. ಆಸೆಯಿರಬೇಕು, ಕನಸಿರಬೇಕು,ಮನೆಯಲ್ಲಿ ಮುದ್ದು ಕಂದನ ತುಂಟಾಟದ ಓಡಾಟವಿರಬೇಕು.ಇಷ್ಟು ಆಸೆ ಪಟ್ಟಿದ್ದು ತಪ್ಪಾ? ಅಸಡ್ಡೆಯ ನೋಟದಲ್ಲಿ ಕೆಂಡವನ್ನು ಸುರಿವವರಿಗೆ ಏನೆನ್ನಬೇಕೋ? ಅರ್ಥವಾಗಲಿಲ್ಲ.ಕಾಲ ಬದಲಾದರೂ ಮನಸ್ಥಿತಿ ಬದಲಾಗಿಲ್ಲ. ತಪ್ಪುವೊಪ್ಪು ಆ ಕ್ಷಣಕೆ ಸೀಮಿತವಾದರೂ ನೆಮ್ಮದಿ ಬೇಕಲ್ಲ.

ಮನಿಮುಂದ ಬುಡಬುಡಕಿಯವನ ಶಬ್ದಕ್ಕೆ ಮನೆಯವರೆಲ್ಲರಿಗೂ ಏನೋ ವಿಶೇಷ ನಂಬಿಕೆ ಅವ ನುಡಿವ ಭವಿಷ್ಯದ ಮೇಲೆ.ಸೇರಕ್ಕಿ,ಜ್ವಾಳ,ಕಾಸು ಅವನ ಜೋಳಿಗೆಗೆ ಹಾಕಿದ್ರಾತು.ಮದುವೆಯಾಗಿ ಇಷ್ಟ ವರ್ಷ ಕಳೆದರೂ ಕೂಸಿನ ಧ್ವನಿಯಿಲ್ಲ ಮನಿಯೊಳಗ.ಗಂಡಿನ ಪರ ಸಾಂತ್ವಾನದ ಮಾತುಗಳು.ಅಪರಾಧಿ ನೇತ್ರಗಳು ಬತ್ತಿದ ಕೊಳದಂತೆ.ಸಮಸ್ಯೆಯ ಹಂದರ ಹೆಣೆದು ಮಾತು ಮಾತಿಗೂ ಚುಚ್ಚುವ ಮುಳ್ಳಿನ ತಂತಿ ದೇಹಾವರಿಸಿದಂತೆ.ಸಹಿಸುವ ಗುಣ ಹೆಣ್ಣಿಗೆ,ಗಂಡಿಗೆ ಸಮಾನವಾಗಿದ್ದರೂ,ಹೆಚ್ಚು ಬೆಂದು ಬಳಲಿ ದೃಢವಾದವಳು ಭೂಮಿಯಂತೆ ಕ್ಷಮೆಯಾಧರಿತ್ರಿ ಹೆಣ್ಣೆಂಬ ಅಚ್ಚರಿಯ ಸಂಗತಿಯಾದರೂ,ಪ್ರತಿಮನೆಯ ದೀಪ,ದೀಪಾಳಿಯ ಪ್ರತೀಕ ಎಂದರೆ ಅವಳೆಂಬ ಸತ್ಯ ಮರೆತಂತೆ ಕಾಣುತ್ತಿತ್ತು. ಬಹುತೇಕ ಮನೆಗಳಲ್ಲಿ ಮಗ/ಮಗಳಿಗೆ ಸಮಾನತೆಯ ಬಾಂಧವ್ಯವನ್ನು ಗಟ್ಟಿಗೊಳಿಸುವಲ್ಲಿ ವಿಫಲರಾಗುತ್ತಿರುವುದು ಹಾಗೂ ಅತಿ ವಿರಳವಾಗಿ ಕೆಲವು ಕಡೆ ಗಟ್ಟಿಯಾಗುತ್ತಿರುವುದು ಕಂಡರೂ, ಬಲಪಡಿಸುವ ತಾಕತ್ತುಇಂದಿಗೂಅಷ್ಟಕ್ಕಷ್ಟೇ ಎಷ್ಟಾದರೂ ಪರ ಧನವೆಂದು ಸ್ವೀಕರಿಸಿರುವ ಸಮಾಜದ ರೀತಿ ನೀತಿಗಳು ಅಡ್ಡಗೋಡೆಯ‌ ಮೇಲೆ ದೀಪವಿರಿಸಿದಂತೆ.ಸ್ವತಂತ್ರ ಮನೋಭಾವ ಸಿದ್ದಿಸಲು ಕಷ್ಟಪಡುವ ಕಾಲಘಟ್ಟಕೆ ಸಿದ್ದವಾಗಬೇಕಿದೆ.

ಒಪ್ಪೋರಣಮಾಡಿ ಸಂಸಾರ ಅಚ್ಚುಕಟ್ಟಾಗಿ ನಡೆಸಿಕೊಂಡು ಹೋಗುವ ಮನಸ್ಸು ಎಲ್ಲರಲ್ಲಿ ಮನೆ ಮಾಡಿರುತ್ತದೆ.ಕಾರಣ ನಮ್ಮದೆಂಬ ಭಾವ.ಅರಿತಿರುವ ಮನದಿಂದ ಅರಿಯದ ಅಪರಿಚಿತ ಮನೋಭಿಲಾಷೆಗೆ ಹೊಂದಿಕೊಳ್ಳುವುದು ಅಷ್ಟು ಸುಲಭವಲ್ಲ.ನೂರಾರು ಜನರ ನಡುವೆ ವೈಭವಿಕರಿಸಿ ಸೇರಕ್ಕಿ ಹೊಸಿಲದಾಟಿಸಿ ಮುನ್ನಡೆವವಳ‌ ಕೈ ಹಿಡಿದು ಹೊರಟವಗೆ ಅವಳ ಭಯ ಆತಂಕ,ನಿರುತ್ಸಾಹ,ಅನುಮಾನ.ಹುಟ್ಟಿ ಬೆಳೆದ ಮನೆಯಂಗಳದಲ್ಲಿ ಸ್ವಚ್ಛಂದವಾಗಿ ನಲಿದವಳ ಕಾಲಿಗೆ ಸಂಸಾರದ ಜವಾಬ್ದಾರಿಯ ಬಿಗಿಬಂಧವನ್ನು ಬಿಗಿದಷ್ಟು ಕಾನನದಿ ಕಂಗೆಟ್ಟ ಹರಿಣಿಯಂತೆ ಬೆಸ್ತುಬಿದ್ದವಳು. ಅಂಗೈಯಲ್ಲಿ ಹೂವಿನಂತೆ ಎತ್ತಿಒಳನಡೆದವನ ಕಂಡು ನಾಚಿಕೆಯ ತೇರು ಕಣ್ಣಾವರಿಸಿತ್ತು.ಗಟ್ಟಿಗಿತ್ತಿಯಾದರೂ
ನನ್ನದಲ್ಲದ ಸ್ಥಳಕೆ ತಳವೂರುವುದು ಅನಿವಾರ್ಯವೆಂಬ ವಾಸ್ತವ ಮೂಡಿಸಿದ್ದು ವಿಚಿತ್ರ.

ಸಂಪ್ರದಾಯದ ಚೌಕಟ್ಟು ಅದರೊಳಗೊಂದು ಆಯಕಟ್ಟಿನ ದೃಷ್ಟಿಯಿಂದ ಹರವಿನ ರೋಹಿತ ದರ್ಶನ. ಭಲೇ…ಚಕೋರಿಯೆಂದಾಗೆಲ್ಲ ಎದೆಯುಬ್ಬಿಸಿಕೊಂಡು ಮೆರದದ್ದೆ ಬಂತು.ನೀ ನನಗೆ ಮಗು,ನಾ ನಿನಗೆ ಮಗು ಬೇರೆಯ ಚಿಂತೆ ನಿನಗ್ಯಾಕೆಂದು ಸಂತೈಸಿದ ಮನಸ್ಸೆಲ್ಲಿ? ಹರಯದ ಸಂಭ್ರಮ ಸಡಗರ ಬಹುದಿನವಿರಬೇಕಲ್ಲ. ದಿನಗಳೆದಂತೆ ಹೊಸ ಹುರುಪು ಮಾಯ.ಅದೇ ಹವ್ಯಾಸ,ಮೋಜುಮಸ್ತಿಎಷ್ಟೋ ಪ್ರವಾಸ ಕೈಗೊಂಡರು ನೆಮ್ಮದಿ ಕ್ರಮೇಣ ಮಂಜಿನಂತೆ ಕರಗುತ್ತಿರುವುದು ಕಂಕುಳಲ್ಲಿ ಕೂಸಿಲ್ಲದಿರುವುದಕೆ.ಅಂದ ಮೇಲೆ ಘಾಸಿಯಾದ ಹಾಗೂ ವಾಸಿಯಾಗದ ಅಂಟು ರೋಗ ಅಂಟಿದಂತಾಗಿ ಮೇಣದಂತೆ ಕರಗಿ ನೀರಾದ ಗಳಿಗೆಯ ಯಾರ ಮುಂದೆಯು ಹೇಳದಂತೆ ತುಟಿಕಚ್ಚಿ ಬಿಕ್ಕಳಿಸಿ ನೆಲಕಚ್ಚಿದ್ದಿದೆ.

ಪ್ರತಿಕೃತಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಇದ್ದು ಇಲ್ಲದಂತಾಗಿ ಬದುಕಿದ ಬದುಕಿಗೆ ಅರ್ಥಕಳೆದುಕೊಂಡ ಅನುಭವ. ಎಷ್ಟು ಬೇಗ ಎಲ್ಲರ ಹುಸಿಮುನಿಸಿಗೆ ಕಾರಣವಾಯಿತು. ಪ್ರೀತಿಯಿದೆ ಅದೀಗ ಅನುಕಂಪದ ನೆಲೆಯಲ್ಲಿ ವಾಲುತ್ತಿರುವುದು ಯಾವ ಹೆಂಗರಳಿಗೂ ಸಹಿಸಲು ಸಾಧ್ಯವಿಲ್ಲ.ಗಂಡೆಂಬ ಗುಂಡಿಗೆವಾಲಿದರೂ ಅಪವಾದ ಹೊಗೆ ಭುಗಿಲೆದ್ದು ಮಂಜಾಗಿಸಿದ ಮನಕೆ ದೀವಿಗೆಯ ಹಿಡಿವವರು ಯಾರು?ಮುಸುಕಿನೊಳು ಗುದ್ದಾಟ,ಶುಭ ಸಂಭ್ರಮಕೆ ಕರೆಯೋಲೆ ಬಂದಾಗಂತೂ ತುದಿಗಾಲಲಿ ನಿಂತವರಿಗೆ ಭೂಕುಸಿತಗಳು ಕಾದಿದ್ದು ಆಶ್ಚರ್ಯವಿಲ್ಲ.

ನೂರು ದೇವರ ಹರಕೆಗಳು,ಉಪವಾಸದ ಕ್ಷಣಗಳು, ವ್ರತಗಳು,ಪೂಜೆಗಳಿಗೆ ಬರವಿಲ್ಲ,ಅಶ್ವತವೃಕ್ಷಕೆ ಸುತ್ತಿದ ದಾರಗಳು,ಕರ್ಪೂರದಾರತಿ,ವರ್ಷ ಪೂರ್ತಿ ಬಿಡುವಿಲ್ಲದ ದೈವಕೆ ಮೊರೆ ಹೋಗಿದ್ದಕ್ಕೆ ಕನಸುಗಳು ಬೀಳುವುದು ಕಡಿಮೆಯಾಗಿ,ದುಃಸ್ವಪ್ನಗಳು ಹೇರಿಕೆಯಾಗಿ ಒಕ್ಕರಿಸಿದ್ದರಿಂದ ನಿದ್ದೆಯಲ್ಲೂ‌ ಹೆದರಿದ್ದಿದೆ.ಮುಟ್ಟಿನ ಅರಿವಾಗುತ್ತಿದ್ದಂತೆ ಕಣ್ಣೀರಧಾರೆ ಸುರಿಸಿದ್ದಿದೆ.ಮಾಡಿದ್ದೆಲ್ಲ ನಿಷ್ಪ್ರಯೋಜಕ ಪಾಪಿ ಮುಳುಗಿದ್ದಲ್ಲಿ ಮೊಳಕಾಲ್ನೀರು. ನಿರಾಸೆಯಾದರೂ ನಿರೀಕ್ಷೆ.ಯಾರೋ ತಲೆ‌ಸವರಿದಂತಾಗಿ ಕಣ್ತೆರೆದರೆಲ್ಲಿ ಮಾಯವಾದಿತೆಂಬ ಭಯದಿಂದ ಹಾಗೆ ಆಹ್ವಾನಿಸಿದಂತೆ.ಅಭೂತಪೂರ್ವ ಸ್ಪರ್ಶ ಮೈಮನಕೆ ಚೈತನ್ಯದ ಚಿಲುಮೆ ಹೊಕ್ಕಂತಾಗಿ ಮಂದಹಾಸ ಮೊಗದಲಿ ಮೂಡಿದ್ದು ಪವಾಡವೇ ಸರಿ.

ಒಳ್ಳೆಯದು,ಕೆಟ್ಟದ್ದು ಎನ್ನುವ ಭ್ರಮೆಯಿಂದ ಹೊರ ಬಂದ ತಲ್ಲಣಗಳು ಬೆಚ್ಚಿಬಿದ್ದಿವೆ.ಯಾವಾಗ ಯಾರ ಅಭಯ ಹಸ್ತ ಸಾಮುದ್ರಿಕ ಸ್ಪೂರ್ತಿ ಪಡೆದ ನಂತರ ಅದೊಂದು ಹೊಂಬೆಳಕು.ತೊಟ್ಟಿಲು ತೂಗುವ ಕೈ ಇಡೀ ಜಗತ್ತನ್ನೇ ತೂಗಬಲ್ಲದು ನಿಜವೆನ್ನಿಸಲು ಸಾಕ್ಷಿಗಳು;ಎದುರಾದಾಗ ಅಂತಃಕರಣವು ಯಾವ ರೂಪ ತಾಳಿತೆಂದು ಬಳಲಿಬೆಂಡಾದ ಮನಕೆ ಹುಲುಕಡ್ಡಿಯ ಭರವಸೆ ಒದಗಿದ್ದಕ್ಕೆ ಸಂತಸದ ಕಿರುನಗೆ. ಬಯಲಲಿ ಲೀನವಾದಾಗ ಸುತ್ತಲು ಕೊರಡು ಕೊನರಿದಾನುಭವ. ಪ್ರಕೃತಿಯು ಹಸಿರಾಗಿ ನವಿರಾಗಿ ತನ್ನೊಳಗೆ ಅಡಗಿದ ಅನರ್ಘ್ಯ ಪರಂಪರೆಯ ಮೂರ್ತರೂಪ ತಾಳಿಸಿದ್ದು ಜೀವಂತಿಕೆಯ ಪ್ರತಿಫಲಕ್ಕೆ ಸಾಕ್ಷಿ.

ನಿರಾಸೆಗೆ ಒಲಿದ ಪ್ರೀತಿಯ ಸ್ವಪ್ನ ಸಾದೃಶ್ಯವಾಗಿದ್ದು ತೊಟ್ಟಿಲು ತನ್ನಿಂದತಾನೆ ಮಿಸುಕಿದ್ದು,ಅವಳಂತರಂಗಕೆ ಅವಳ ಪ್ರತಿಬಿಂಬದ ಮುದ್ದು ಕಂದ ಪಿಳಿಪಿಳಿ ಕಣ್ಣಗಲಿಸಿ ಬಚ್ಚಬಾಯಿಯಲಿ ಮುಗುಳ್ನಗುವಾಗ ಎಲ್ಲರ ಮುನಿಸಿನ ಹೊಟ್ಟೆಕಿಚ್ಚಿಗೆ ತಣ್ಣೀರು ಎರಚಿದಂತಾಗಿತ್ತು.ಭಲೇ ಬದುಕು ನಾವೆಣಿಸಿದಷ್ಟು ಸುಲಭವಾಗಿ ದಕ್ಕಲು ಸಾಧ್ಯವಿಲ್ಲವೆಂಬುದು ಕಷ್ಟವಾದರೂ ಒಪ್ಪಿಕೊಳ್ಳದೇ ವಿಧಿಯಿಲ್ಲ….ಆಗಸದಲಿ ಮಿನುಗುವ ನಕ್ಷತ್ರಗಳು ಆಗಾಗ ನೆಲಕುರುಳುವ ಸನ್ನಿವೇಶಗಳು ಶುಭಸೂಚನೆಯಂತ ಯಾರೋ ಹೇಳಿದ್ದು ನೆನಪಾಗಿ ಮಡಿಲಲಿ ನಗುವ ಕೂಸು ತಾರೆಯಂತೆ ಎದೆಯೊಳಗೆ ಅವಿತಸುಖಾನುಭವ…

+14

6 thoughts on “ಸುಖದ ಹೊನಲು ಮುಡಿಗೇರಿ.. ಶಿವಲೀಲಾ ಹುಣಸಗಿಯವರ ಬರಹ

    1. ಸೊಗಸಾಗಿ ಮೂಡಿಬಂದಿದೆ ಮೇಡಮ್..

      +3
  1. ತುಂಬಾ ಸುಂದರವಾಗಿ ಮೂಡಿ ಬಂದಿದೆ ರೀ ಮೇಡಂ 🙏🏻🙏🏻. ಸಾಧನೆಯ ಹಾದಿಯಲ್ಲಿ ಸಾಗಿ ಸಾರ್ಥಕತೆ ಎನಿಸಿದಾಗ ಈ ಒಂದು ಉನ್ನತ ವಿಚಾರ ಸಂಕಿರಣ ಹೊರಬರಲು ಸಾಧ್ಯ ಎಂದು ನಿರೂಪಿಸುವ ಪ್ರಯತ್ನ ಅಧ್ಭುತ .

    +3

Leave a Reply

Your email address will not be published. Required fields are marked *

error: Content is protected !!