ಒಂದು ವ್ಯಾಲೆಂಟೈನ್ ಡೇಯೊಳಗಿಂದ…. ಅನುರಾಧ ಪಿ‌ ಸಾಮಗರ ಬರಹ

ಅವಳದೀಗ ಹದಿಹರಯವನ್ನು ದಾಟುವ ವಯಸು. ತಂದೆತಾಯಿಯರು ಐವತ್ತರ ಆಸುಪಾಸು.
ಸ್ವಲ್ಪವೇ ಸಮಯದ ಹಿಂದಿನವರೆಗೆ ಅವಳಿಗೆ ಅಪ್ಪ-ಅಮ್ಮನ ನಡುವೆ ತನ್ನ ಪಟ್ಟಭದ್ರ
ಮಾಡಿಕೊಳ್ಳುವದ್ದು ಬಿಟ್ಟರೆ ಬೇರೇನೂ ಪ್ರಾಮುಖ್ಯವಾದದ್ದು ಅಂತನಿಸುತ್ತಿರಲಿಲ್ಲ. ಅವರಿಬ್ಬರೇ
ಒಂದುಕಡೆ ಕೂತು ಮಾತಾಡುತ್ತಿದ್ದರೆ ಮಧ್ಯೆ ವಿಷಯವಿತ್ತೋ ಇಲ್ಲವೋ ತನ್ನದೊಂದು ಮಾತನ್ನು
ತೂರಿಸಿ, ಮನೆಯಲ್ಲೋ ಹೋಟೇಲಲ್ಲೋ ಅಕ್ಕಪಕ್ಕ ಕೂತಿದ್ದರೆ ಮಧ್ಯದಲ್ಲಿ ತಾನು ಜಾಗ
ಮಾಡಿಕೊಂಡು ಒಬ್ಬರನ್ನು ಅತ್ತತ್ತ ಸರಿಸಿಬಿಟ್ಟು, ಮಧ್ಯರಾತ್ರಿ ಅದೆಷ್ಟೋ ಹೊತ್ತಿಗೆ ತನ್ನ ರೂಂನಿಂದ
ಬಂದು ಅವರಿಬ್ಬರ ಮಧ್ಯೆ ನುಸುಳಿ ಮುದುರಿ ಮಲಗಿ ಹೀಗೆ ಅವರಿಬ್ಬರ ಸಂಬಂಧದೊಳಗೆ ತನ್ನನ್ನು
ಹೊಗಿಸಿ ಆ ಸಂಬಂಧದ ಭಾಗವಾಗಿಯೇ ತನ್ನನ್ನು ನೋಡಿಕೊಳ್ಳುವುದರಲ್ಲಿ ಮಗ್ನಳಿದ್ದವಳು! ಇತ್ತೀಚೆಗೆ
ಪ್ರಪಂಚಕ್ಕೆ ತೆರೆದುಕೊಳ್ಳುತ್ತಾ, ಗೆಳೆಯಗೆಳತಿಯರ ಪ್ರೀತಿ, ಪಕ್ಕದ ಮನೆ ಆಂಟಿ ಕೊಡುವ
ಪ್ರಾಮುಖ್ಯತೆ, ಆ ಮನೆಯ ಮುದ್ದು ತಂಗಿಯಂಥವಳ ಅಕ್ಕರೆಯ ಬಂಧ, ಬ್ಯೂಟಿ ಪಾರ್ಲರಿನ ಆಕೆ
ತೋರುವ ಕಾಳಜಿಪೂರ್ವಕ ಅಭಿಮಾನ ಹೀಗೆ ಕೆಲವು ಗಮನಗಳು ಅವಳಿಗೆ ಸಿಗುತ್ತಾ, ಹೊರಗಿನ
ಬಂಧಗಳೊಂದಿಗೆ ಬೆಸೆದುಕೊಳ್ಳುತ್ತಾ ಅಪ್ಪ-ಅಮ್ಮನ ನಡುವಿನ ಸಂಬಂಧವನ್ನು ತಾನು
ಅದರಿಂದಾಚೆ ನಿಂತು ನೋಡುವುದನ್ನು ಯಾವುದೋ ಹಂತದಲ್ಲಿ ಬದುಕು ಅಭ್ಯಾಸ ಮಾಡಿಸಿತು.


ಮದುವೆಯಾಗಿ ಇಪ್ಪತ್ತೈದು ವರ್ಷಗಳಲ್ಲಿ ಅಲ್ಲಿ ಮೂಡಿರುವ ಭಾವನಾತ್ಮಕ ಬೆಸುಗೆ, ಅವಲಂಬನೆಗಳು
ಕಂಡದ್ದಕ್ಕಿಂತ ಹೆಚ್ಚು ಪರಸ್ಪರರ ಬಗೆಗಿನ ದೂರುದುಮ್ಮಾನಗಳು ಮತ್ತು ನಿಲುವುಗಳಲ್ಲಿ ಒಂದಿಷ್ಟೂ
ಹೊಂದಿಕೊಳ್ಳದ ವಿಭಿನ್ನ ವೇವ್ಲೆಂತ್ ಗಳು ಅವಳಿಗೆ ಕಾಣತೊಡಗಿದವು, ಕಾಡತೊಡಗಿದವು. ಅಪ್ಪನಿಗೆ
ಇಷ್ಟ ಆಗಲ್ಲ ಅದೆಲ್ಲ ಕಣೇ, ಬೇಜಾರಾಗುತ್ತದೆ ಅವರಿಗೆ ಅಂತ ತನ್ನ ಪುಟ್ಟದರಿಂದ ಹಿಡಿದು ದೊಡ್ಡದೊಡ್ಡ
ಆಸೆಗಳನ್ನ ಒಳಗೊಳಗೇ ಅದುಮಿಟ್ಟುಕೊಂಡು, ತನ್ನತನವನ್ನ ಒಂದು ಡಬ್ಬಿಯೊಳಗಿಟ್ಟು ಭದ್ರ ಮುಚ್ಚಳ
ಹಾಕಿ ತಾನು ಪರಮಸುಖಿಯೆಂದು ಬಿಂಬಿಸಿಕೊಳ್ಳುವಂತೆ ಅಮ್ಮ ಕಂಡರೆ, ಅಮ್ಮನಿಗೆ ಟೆನ್ಶನ್
ಆಗುತ್ತದೆ, ಮೊದಲೇ ಬಿಪಿ ಪೇಶೆಂಟು, ಅವಳಿಗೆ ಹೇಳುವುದು ಬೇಡ ಕಣೇ ಅಂತ ತನ್ನೆಲ್ಲ ಹೊರಪ್ರಪಂಚದ ಧಾವಂತಗಳನ್ನ, ತೊಳಲಾಟಗಳನ್ನ ಪತ್ನಿಯಿಂದ ಮುಚ್ಚಿಟ್ಟು ಒಳಗೊಳಗೇ

ಒದ್ದಾಡುತ್ತ ಹೊರಗೆ ಸುಳ್ಳುಸುಳ್ಳೇ ನಗುವಂತೆ ಅಪ್ಪ ಕಾಣುತ್ತಾನೆ… ಇವರಿಬ್ಬರದೂ ಮನಸುಗಳ
ದಿಟದ ಪರಿಸ್ಥಿತಿ ಮತ್ತು ತೋರಿಕೆಯ ವರ್ತನೆಗಳ ನಡುವೆ ಇರುವ ಕಂದಕ ಅವಳನ್ನು
ಗಾಭರಿಗೊಳಿಸುತ್ತದೆ. “ಯಾಕಮ್ಮಾ… ನಿನ್ನ ಬದುಕಿನ ಅವಧಿಯಲ್ಲಿ, ಈ ಅವಕಾಶದಲ್ಲಿ ಅಲ್ಲದಿದ್ದರೆ
ನಿನ್ನ ಆಸೆಗಳಿಗೆ ಯಾವಾಗಲಮ್ಮಾ ಸಮಯ ಬರುವುದು?” ಅಂತ ಕೇಳಿದರೆ, “ಮದುವೆ ಎನ್ನುವ
ಅಥವಾ ಯಾವುದೇ ಒಂದು ಜೊತೆಗಿರುವುದು ಅನ್ನುವ ವ್ಯವಸ್ಥೆ ಉದ್ದುದ್ದ ಉಳಿದುಕೊಳ್ಳಬೇಕಾದರೆ
ನಾನು ಅನ್ನುವದ್ದನ್ನ ಇಂಚಿಂಚಾಗಿ ಕರಗಿಸುತ್ತಾ ಇರಬೇಕಮ್ಮಾ…” ಅಂತಾಳೆ ಅಮ್ಮ. “ಯಾಕಪ್ಪಾ
ಅಮ್ಮನಿಂದ ಹೀಗೆ ಎಲ್ಲ ಮುಚ್ಚಿಟ್ಟು…?” ಅಂದರೆ, “ಏ ಬದುಕು ಅಂದರೆ ಟು ಪ್ಲಸ್ ಟು ಈಸ್ ಫೋರ್
ಅಂದಷ್ಟು ನೇರ ಅಲ್ಲಮ್ಮಾ…ಪ್ರೀತಿಸುವವರ ಒಳಿತಿಗಾಗಿಯೇ ಒಮ್ಮೊಮ್ಮೆ ಅವರೊಂದಿಗೆ
ಮೇಲ್ನೋಟಕ್ಕೆ ತಪ್ಪು, ಸುಳ್ಳು ಅಂತಲೇ ಅನಿಸುವ ಲೆಕ್ಕಾಚಾರದಲ್ಲಿ ಬದುಕಬೇಕಾಗುತ್ತದೆ” ಅಂತಾನೆ
ಅಪ್ಪ. ಅಯ್ಯಬ್ಬ ಮದುವೆಯೆಂದರೆ ಒಬ್ಬರಿಗೊಬ್ಬರು ಪಾರದರ್ಶಕವಾಗಿದ್ದುಕೊಂಡು ಒದಗುವುದಲ್ಲದೇ
ಹೀಗೆ ಒಳಗೊಂದು ಹೊರಗೊಂದು ಅಂತ ಇರಬೇಕಾದ ಇಂಥ ಶಿಕ್ಷೆಯಾ….ಅಂತ ಗಾಬರಿಗೊಳ್ಳುವ
ಮನಸಿಗೆ ಮತ್ತು ಒಂದುದಿನ ಬಂದು ಪ್ರೀತಿಯ ಹೊಳೆಯಲ್ಲಿ ತನ್ನನ್ನು ವಿಹರಿಸಲು ಕರೆದೊಯ್ಯಲು
ಬರಲಿರುವವನ ಕನಸಿಗೆ ತಾಳಮೇಳವಾಗದೇ ಗೊಂದಲಕ್ಕೆ ಬೀಳುತ್ತಾಳವಳು!


ಹೀಗಿರುವಾಗ ಆ ವರ್ಷದ ವ್ಯಾಲೆಂಟೈನ್ಸ್ ಡೇ ಬಂತು. ಬೆಳಿಗ್ಗೆ ಎದ್ದಾಗಿಂದಲೇ ಮನಸು ಅವರಿಬ್ಬರನ್ನು
ಗಮನಿಸಲು ಶುರುವಾಗುತ್ತದೆ. ಅವಳೆದ್ದು ಬರುವಾಗ ಎಂದಿನಂತೆ ಅಪ್ಪ ವಾಕಿಂಗ್ ಹೊರಡುತ್ತಿದ್ದರೆ
ಅಮ್ಮ ಸ್ನಾನ ಮುಗಿಸಿ ಪ್ರಾಣಾಯಾಮ ಮಾಡುತ್ತಿರುತ್ತಾಳೆ. ನಂತರ ಕಾಫಿ ಕುಡಿದು ಅವರಿಬ್ಬರೂ
ಯಾವ್ಯಾವುದೋ ಲೋಕಾಭಿರಾಮ ಮಾತಾಡುತ್ತಿದ್ದರೆ, ಇವಳು ಫೋನಿನಲ್ಲಿ ವಾಟ್ಸಾಪ್ ಸ್ಟೇಟಸ್
ಗಳನ್ನು ನೋಡುತ್ತಿರುತ್ತಾಳೆ. ಅಕ್ಕಪಕ್ಕದ ಮನೆಯ ದಂಪತಿ ಇನ್ನೂ ಮದುವೆಯಾಗಿ ಆರು, ಏಳು,
ಹತ್ತು ವರ್ಷವಾದವರು, ತಮ್ಮ ಸವಿನೆನಪಿನ ಫೊಟೋಗಳೊಂದಿಗೆ ಸಂಗಾತಿಗೆ ಗುಲಾಬಿ, ಹೂ
ಬೊಕೇ, ಉಡುಗೊರೆಗಳನ್ನು ಕೊಟ್ಟ ಫೊಟೋ ಹಾಕಿಕೊಂಡಿರುತ್ತಾರೆ. ಇವಳು ತನ್ನಪ್ಪ ಅಮ್ಮನ

ಸ್ಟೇಟಸ್ ಗಮನಿಸುತ್ತಾಳೆ, ಎಂದಿನಂತೆ ಅಮ್ಮ ತನ್ನ ಬೆಳಗೆಂಬ ಬೆರಗನ್ನು ಬಣ್ಣಿಸಿರುತ್ತಾಳೆ, ಅಪ್ಪ
ಬದುಕಿನ ಚೆಲುವನ್ನು ಹೇಳುವ ಕೆಲಸಾಲು ಹಂಚಿಕೊಂಡಿರುತ್ತಾನೆ.
ಮತ್ತೆ ಅವರಿಬ್ಬರನ್ನು ನೋಡುತ್ತಾಳೆ ಒಂದಿಷ್ಟೂ ವ್ಯತ್ಯಾಸವಿಲ್ಲದೆ ಸಾಗುತ್ತಿರುವ ಅವರ
ದಿನಚರಿಯೊಳಗೆ ಮತ್ತೆ ಅವಳ ಮನಸು ಕೆಡುತ್ತದೆ. ಅಪ್ಪ ತೋಟದಲ್ಲಿ ನೀರುಣಿಸುತ್ತಿರುವಾಗ
ಒಳಗಿರುವ ಅಮ್ಮನನ್ನ ಕೇಳುತ್ತಾಳೆ, “ಅಮ್ಮಾ… ಅಪ್ಪಂಗೆ ವಿಶ್ ಮಾಡಿದೆಯಾ…” ಮಗಳ ಮುಖದಲ್ಲಿ
ಹರವಿಕೊಂಡಿದ್ದ ತೆಳುವಾದ ಅಸಹನೆ ನೋಡಿ ಅಮ್ಮನಿಗೊಂದು ಕ್ಷಣ ಗಲಿಬಿಲಿಯಾದರೂ ಮಗಳ
ಮೇಲೆ ಮುದ್ದು ಉಕ್ಕಿ ಬಂದು ಕೆನ್ನೆಗೊಂದು ಮುತ್ತಿಕ್ಕಿ “ಏ ಬಂಗಾರೀ, ಗಂಡಹೆಂಡತಿಯ ಪ್ರೀತಿ
ಅನ್ನುವದ್ದು ಒಳಗೆ ಪರಸ್ಪರರಿಗಷ್ಟೇ ಭಾಸವಾಗುವ ತಾಣದಲ್ಲಿರುತ್ತದೆ ಮಾರಾಯ್ತೀ… ಹೀಗೆ
ಹೊರಜಗತ್ತಿಗೆ ಕಾಣುವದ್ದು ನೋಡುವವರ ಕಣ್ಣಲ್ಲಿ ಮೂಡುವ ಅದರ ಬಿಂಬವಷ್ಟೇ… ಹೊರಗಿನ ಬೆಳಕು,
ನೋಡುವ ಕಣ್ಣಿನ ಸಾಮರ್ಥ್ಯ ಇವೇ ಮುಂತಾದವುಗಳ ಮೇಲೆ ಆ ಬಿಂಬದ ಸ್ವರೂಪ ಹೇಗೆಹೇಗೋ
ಬದಲಾಗಿ ಕಾಣಬಹುದು.… ನಿನಗೆ ಕಂಡದ್ದಷೇ ಇರುವುದಲ್ಲ ಅಥವಾ ನಿನಗೆ ಕಾಣದ್ದು ಇಲ್ಲವೆಂಬುದೂ
ಸತ್ಯವಲ್ಲ ಅಲ್ವಾ..”. ಅನ್ನುತ್ತಾ ಹೊರ ಬಂದು ತೋಟದಲ್ಲಿರುವ ಗಂಡನಿಗೆ ಹೇಳುತ್ತಾಳೆ, “ಹ್ಯಾಪೀ
ವ್ಯಾಲೆಂಟೈನ್ಸ್ ಡೇ…”
ಅಪ್ಪ ಅಲ್ಲಿಂದಲೇತಿರುಗಿ, ಹೋ… ಹೌದಲ್ಲಾ… ನಿಂಗೂ ಹ್ಯಾಪೀ ವ್ಯಾಲೆಂಟೈನ್ಸ್ ಡೇ..” ಅಂತಾನೆ
ನಗುಬೀರಿ. ಆ ಕ್ಷಣದಲ್ಲಿ ಫಳ್ಳೆಂದ ಅವರಿಬ್ಬರ ಕಣ್ಣ ಹೊಳಪು ನೋಡಿ ಮಗಳಿಗೆ ಸ್ವಲ್ಪ
ಸಮಾಧಾನವಾದರೂ ಹೊರನಡೆದವಳು ಅಪ್ಪನನ್ನು ಕೇಳುತ್ತಾಳೆ, “ಅಪ್ಪ, ಇವತ್ತಾದರೂ ಅಮ್ಮನಿಗೆ ಐ
ಲವ್ಯೂ ಅಂತೀಯಾ“? “ ಹೇ ಖಂಡಿತ ಮುದ್ದೂ..” ಅಂತ ನಕ್ಕ ಅಪ್ಪನ ಕಣ್ಣಲ್ಲಿ ಯಾವುದಾದರೂ
ನಾಟಕೀಯತೆ ಇದೆಯಾ ಅಂತ ಹುಡುಕುತ್ತಾಳೆ, ಅಲ್ಲಿದ್ದದ್ದು ಒಂದು ಕೃತಕೃತ್ಯತೆಯ ಮತ್ತು
ಸಂತೋಷದ ನಿರಾಳ ಭಾವ. ಒಳಬಂದು ಎದುರು ನಿಂತು ಐ ಲವ್ಯೂ ಅಂದ ಅಪ್ಪನ ಕಣ್ಣಲ್ಲಿ ಕಣ್ಣಿಟ್ಟು
ಐ ಲವ್ಯೂ ಟೂ ಅಂದ ಅಮ್ಮನ ಮುಖದಲ್ಲಿ ನೋವಿದೆಯಾ, ದೂರು ಇದೆಯಾ ಅಂತ ಹುಡುಕುತ್ತಾಳೆ,
ಇಲ್ಲ, ಅಲ್ಲಿರುವ ಶಾಂತಿ ಒಂದು ಬಲುವಿಚಿತ್ರವೇ ಹೌದು ಆದರೆ ಅದರ ಸಹಜತೆಯಲ್ಲಿ ತಾನಿನ್ನೂ ತಿಳಿದುಕೊಳ್ಳಲಾಗದ ಒಂದು ಮೆಲುವಾದ ಸಂದೇಶವೂ ಇದೆ ಅನ್ನಿಸಿ ಮತ್ತೆ ಗೊಂದಲಕ್ಕೊಳಗಾಗುತ್ತಾಳೆ.

ಈ ಪ್ರೇಮದ ದಿನದಂದು ಪ್ರಪಂಚವಿಡೀ ಪುಟಿಯುತ್ತಿರುವ ಉತ್ಸಾಹದಲ್ಲಿ ಮುಳುಗೇಳುತ್ತಿದ್ದರೆ, ಈ
ಇವರ ಆರಕ್ಕೇರದ ಆದರೆ ಮೂರಕ್ಕೂ ಇಳಿಯದ ಸ್ಪಂದನೆ-ಪ್ರತಿಸ್ಪಂದನೆಗಳು ಬೋರು ಅನ್ನಿಸಿ
ಅಲ್ಲಿಂದ ಆಚೆ ನಡೆದುಬಿಡುತ್ತಾಳೆ.
ಸಂಜೆ ಕಾಲೇಜಿಂದ ಬಂದವಳು ಕಾಫಿ ಲೋಟ ಹಿಡಿದು ಬಂದ ಅಮ್ಮನನ್ನು ಕೇಳುತ್ತಾಳೆ, “ಒಂದು
ಹೇಳಮ್ಮ, ನಿಮ್ಮಿಬ್ಬರಲ್ಲಿ ಪ್ರೀತಿ ಈಗಲೂ ಇದೆಯಾ ಅಥವಾ ಬರೀ ಭಾವನಾತ್ಮಕ ಅವಲಂಬನೆ,
ಪರಸ್ಪರರೆಡೆಗೆ ಕರ್ತವ್ಯಪ್ರಜ್ಞೆ, ಜವಾಬುದಾರಿ ಇವೆಲ್ಲ ಮಾತ್ರ ಇರುವುದಾ…” ಬೆಳಗಿನಿಂದಲೂ ಮಗಳ
ಕಣ್ಣಲ್ಲಿ ಕಂಡ ಗೊಂದಲ ತಾನು ನಿವಾರಿಸಬಲ್ಲೆನಾ ಗೊತ್ತಿಲ್ಲ, ಆದರೆ ಅವಳೊಳಗಿನ ಗೋಜಲು ಸ್ವಲ್ಪ
ಸಡಿಲಾಗುವುದಾದರೂ ಸಾಕು ಅಂತನ್ನನಿಸಿ ಅಮ್ಮ ಮಾತಾಡತೊಡಗಿದಳು.
ನಮ್ಮ ಮದುವೆಯಾಗಿ ಇಪ್ಪತ್ತೈದು ವರ್ಷ ದಾಟಿವೆ ಮಗಳೇ… ಪ್ರೀತಿ ಅಂತ ನೀನು ಯಾವುದನ್ನ ಈಗ
ಕಾಣುತ್ತಿದ್ದೀಯಾ ನೋಡು, ಅದು ಮೊದಮೊದಲ ವರ್ಷಗಳಲ್ಲಿ ನಮ್ಮ ನಡುವೆಯೂ ಅದೇ
ಸ್ವರೂಪದಲ್ಲಿತ್ತು. ಈ ಇಷ್ಟು ವರ್ಷಗಳಲ್ಲಿ ನಮ್ಮ ಪರಸ್ಪರರನ್ನ ಕಂಡುಕೊಳ್ಳುವ ಪ್ರಕ್ರಿಯೆ ಮತ್ತು
ಬದಲಾಗುತ್ತಲೇ ಸಾಗುವ ಬದುಕಿನ ಆದ್ಯತೆಗಳ ಕಾರಣದಿಂದಾಗಿ ಕಾಲದಿಂದ ಕಾಲಕ್ಕೆ ತನ್ನ
ಸ್ವರೂಪವನ್ನು ಬದಲಿಸಿಕೊಳ್ಳುತ್ತಾ ಇಂದು ನೋಡು ಒಂದು ಬೆಚ್ಚನೆ ಮೌನದೊಳಗೆ ಹೀಗಿದೆ.
ನಮ್ಮೊಳಗೆ ಹೀಗಾಗಿದೆ ಅಂದರೆ ಎಲ್ಲರ ನಡುವೆಯೂ ಇದಾಗಲೇಬೇಕಂತ ಏನಿಲ್ಲ. ಪ್ರೀತಿಯದು
ಒಂದೊಂದು ಸಂಬಂಧದಲ್ಲು ಒಂದೊಂದು ರೂಪ ಬಂಗಾರೀ.. ಅದು ಕಾಲದ ಜೊತೆ ಸೇರಿ ತಾನೇ
ಹೊಂದುವ ರೂಪದಲ್ಲಿ ಕಾಣಿಸಿಕೊಳ್ಳಬೇಕೇ ಹೊರತು ನಾವು ತಿದ್ದಿತೀಡಿ ಸಿಂಗರಿಸಿ ಹೊರಜಗತ್ತಿಗೆ
ತೋರಹೊರಟರೆ ಅದರೊಳಗಿನ ಟೊಳ್ಳು ಕಂಡೀತು, ಹಾಸ್ಯಾಸ್ಪದವಾದೀತು. ಪ್ರೀತಿ
ಅರಳುವುದೆಂದರೆ ಅದು ಹೂವು ಅರಳುವ ಹಾಗೆ, ಸಹಜ ಮತ್ತು ಸರಳ! ಜಾಜಿ, ಮಲ್ಲಿಗೆ
ಮುಂತಾದುವುಗಳು ಅದೆಲ್ಲೋ ಅರಳಿದರೂ ತಮ್ಮ ಅರಳುವಿಕೆಯನ್ನು ಸುತ್ತಮುತ್ತ ಸ್ಪಷ್ಟ ಸಾರುತ್ತವೆ.

ಅದೇ ರೆಂಜೆ, ಪಾರಿಜಾತಗಳ ಗಂಧ ಸಮೀಪದಲ್ಲಷ್ಟೇ ಭಾಸವಾಗುವುದು ನೋಡು. ಹಾಗಂತ ಅವು
ಎಷ್ಟರಮಟ್ಟಿಗೆ ಹೂವುಗಳೋ ಇವೂ ಅಷ್ಟೇ ಹೂವುಗಳು…ಹಾಗೇ..” ಅಂತೇನೋ ಹೇಳುತ್ತಿದ್ದವಳನ್ನು
ತಡೆದು “ಅಮ್ಮ, ನೀನೇ ಹೇಳಿದ್ದೀಯಾ ನಿನ್ನ ಒಂದು ಪದ್ಯದಲ್ಲಿ ಮಾತುಗಳಲಿ ಮಿಂದು ಮಡಿಯಾಗು
ಅಂತ. ಹಿತವನ್ನಾದರೂ, ಅಹಿತವನ್ನಾದರೂ ಪರಸ್ಪರ ಹೇಳಿಕೊಂಡಾಗ ಅಲ್ಲಿ ಗಟ್ಟಿಯಾಗುತ್ತಾ
ಹೋಗುವ ಸ್ಪಷ್ಟತೆ ಒಂದು ಸಂಬಂಧದಲ್ಲಿ ತುಂಬ ಮುಖ್ಯ ಅಮ್ಮ” ಅನ್ನುತ್ತಾಳೆ, ದನಿಯಲ್ಲಿನ್ನೂ
ಅಸಹನೆಯಿದೆ, ಅಮ್ಮ ಹೌದೆಂದು ತಲೆಯಾಡಿಸುತ್ತಾ ಮುಂದುವರೆಸುತ್ತಾಳೆ.
“ಹೌದೂ… ಇಬ್ಬರ ನಡುವೆ ಮಾತು, ಅಭಿವ್ಯಕ್ತಿ ಅನ್ನುವದ್ದು ಯಾಕಿರುವುದು ಹೇಳು. ಒಂದಾ
ನಮ್ಮೊಳಗನ್ನು ಎದುರಿದ್ದವರಿಗೆ ತೋರಿಕೊಳ್ಳಲಿಕ್ಕೆ ಅಥವಾ ಅವರ ಬಗ್ಗೆ ನಮಗಿರುವ ಸಂದೇಹಗಳನ್ನ
ಪರಿಹರಿಸಿಕೊಳ್ಳಲಿಕ್ಕೆ ಹೌದಾ… ಮದುವೆಯಾದ ಹೊಸತರಲ್ಲಿ ಒಬ್ಬರನ್ನೊಬ್ಬರು ತಿಳಿದುಕೊಳ್ಳುವ
ಕುತೂಹಲ ಬಹಳವಿತ್ತು. ಹಾಗಾಗಿ ಒಂದಷ್ಟು ವರ್ಷಗಳವರೆಗೆ ಮಾತು, ನಡೆ, ಕೆಲವೊಮ್ಮೆ
ಮಾತಿಗಿಂತ ಸ್ಪಷ್ಟ ತನ್ನೊಳಗನ್ನು ತೋರುವ ಮೌನ ಪರಸ್ಪರರನ್ನು ಪರಸ್ಪರರಿಗೆ ಪರಿಚಯಿಸುತ್ತಾ
ಸಾಗಿದವು. ಆಮೇಲಿನ ಒಂದಷ್ಟು ವರ್ಷಗಳಾಗುವಾಗ ಕುತೂಹಲ ತಣಿದಿತ್ತು. ಪರಸ್ಪರರನ್ನು
ಸೂಕ್ಷ್ಮವಾಗಿ ಗಮನಿಸುವುದರಲ್ಲಿ ಕಳೆದ ಈ ಕಾಲ ಅರಗದ ಪರಸ್ಪರರ ಕೆಲವು ಕಹಿಸತ್ಯಗಳ
ಕುರಿತಾಗಿ ಮುನಿಸು, ದೂರುದುಮ್ಮಾನ, ಜಗಳ, ಸಿಟ್ಟು, ಮಾತಿಲ್ಲದ ಭಣಭಣ ಮೌನಗಳು,
ಸಮಜಾಯಿಷಿಗಳು, ಪಶ್ಚಾತ್ತಾಪ, ಓಲೈಸುವಿಕೆ, ತಪ್ಪೊಪ್ಪಿಗೆ ಹೀಗೆ ಕಳೆದವು. ಅಷ್ಟರಲ್ಲಿ ಈ
ಎಲ್ಲವುಗಳು ಒಬ್ಬರ ಪಾಲಿಗೆ ಇನ್ನೊಬ್ಬರನ್ನು ಸಂಪೂರ್ಣಕ್ಕೆ ಹತ್ತಿರ ಅನಿಸುವಷ್ಟರಮಟ್ಟಿಗೆ
ಸ್ವಂತದ್ದಾಗಿಸಿಬಿಟ್ಟವು. ಆ ನಂತರದಲ್ಲಿ ಈ ಎಲ್ಲದರ ಮೂಲಕ ಹಾದುಬರುತ್ತಾ ನಮ್ಮ ಯೋಚನೆ,
ಚಿಂತನೆಗಳು ಬಹಳಷ್ಟು ಭಿನ್ನವೇ ಆಗಿದ್ದರೂ ಅವು ಒಂದಕ್ಕೊಂದು ಹೆಣೆದುಕೊಂಡೇ ನಮ್ಮ ನಡುವಿನ
ಬೆಸುಗೆಯ ರೂಪದಲ್ಲಿದೆ. ನೋಡು, ಒಬ್ಬರನ್ನೊಬ್ಬರು ತಿಳಿದುಕೊಳ್ಳುವಾಗ ಆಭಾಸಗಳೆದುರಾಗುತ್ತವೆ,


ಅಲ್ಲಿ ಭಿನ್ನಾಭಿಪ್ರಾಯ ಮೂಡಿದಾಗ ಅದು ಬೆಳೆದು ನಡುವೆ ಅಸಮಾಧಾನ ಗೋಡೆಯೆಬ್ಬಿಸಲು
ಹೊರಡುತ್ತದೆ, ಸಾವರಿಸಿಕೊಂಡು ಮತ್ತೆ ಕೈಗೆ ಕೈ ಬೆಸೆಯುವಾಗ ನಾನು, ನನ್ನತನ ಅನ್ನುವದ್ದು
ಅತಿಸಹಜವಾಗಿ ಇಣುಕಿ ನಾನಿದ್ದೇನೆ ಎನ್ನುತ್ತಿರುತ್ತದೆ. ಎಲ್ಲವುಗಳನ್ನೂ ದಾಟಿ ಇಷ್ಟು ವರ್ಷಗಳಾದ

ನಂತರವೂ ಮದುವೆಯೆಂಬ ವ್ಯವಸ್ಥೆ ಉಳಿದುಕೊಂಡಿದೆಯೆಂದರೆ ಅಲ್ಲಿ ಮೊದಮೊದಲ ದಿನಗಳಲ್ಲಿ ಈ
ವ್ಯಕ್ತ ಪಡಿಸುವಿಕೆ, ತೆರೆದುಕೊಳ್ಳುವಿಕೆಗಳು ಸದ್ದಿಲ್ಲದೇ ಕಣ್ಮರೆಯ ತೋಟದಲ್ಲಿ ಪ್ರೀತಿ ಬಿತ್ತಿರುವುದೇ
ಅದಕ್ಕೆ ಮೂಲ. ಹೌದು ವ್ಯಕ್ತಪಡಿಸುವುದು ಬಹಳ ಮುಖ್ಯ. ಆದರೆ ಅಲ್ಲಿಂದಾಚೆಗೆ ಅಲ್ಲಿ ಬಿತ್ತಲ್ಪಟ್ಟದ್ದು
ನಿಧಾನ ಮೊಳೆತು, ಬೇರೂರಿ, ಹಸುರು ಮೂಡಿ, ರೆಂಬೆಗಳಲ್ಲಿ ಜೀವಚೈತನ್ಯ ಹರಿದುಬಂದು ಮೊಗ್ಗು
ಕೂತು, ಅದು ಅರಳಿ, ಕಾಯಾಗಿ, ಹಣ್ಣಾಗಿ, ಕಾಲದ ತೆಕ್ಕೆಯಲ್ಲಿ ಬೀಜವುದುರಿ ಮತ್ತೆ ಮೊಳೆತು… ಹೀಗೆ
ಒಂದೆರಡು ಮೂರು, ನೂರಾಗಿ ಈಗ ಕಣ್ಮರೆಯ ಆ ತೋಟದ ತುಂಬ ಪ್ರೀತಿ ಹೂಗಳು
ನಳನಳಿಸುತ್ತಿವೆ. ಈ ಜೀವಚೈತನ್ಯದ ಸರಣಿ ಕಾಲದುದ್ದಕ್ಕೂ ಎದೆನೆಲದ ಪಸೆಯುಂಡಿದೆ. ಎದೆನೆಲ
ಒಣಗದ ಹಾಗೆ ನೋಡಿಕೊಳ್ಳುವ ಜವಾಬುದಾರಿಯಷ್ಟೇ ನಮ್ಮದು. ಅದು ಹೇಗೆಂದರೆ ನೋಡು, ಈ
ಬಂಧವು ನಮ್ಮ ಎದೆಯೊಳಗೆ ಚಿಮ್ಮಿಸುವ ಆರ್ದ್ರತೆಗೆ ನಾನು, ನನ್ನದು ಎಂಬುದರ ಅತಿಯಾದ
ಚಿಂತನೆಯೊಂದೇ ಕಂಟಕ. ನೀನು ಹಾಡುತ್ತೀಯಲ್ಲಾ, ಲೆಟ್ ಇಟ್ ಗೋ ಲೆಟ್ ಇಟ್ ಗೋ….. ಅಂತ
ಹಾಗೆ ತುಸುತುಸುವೇ ನಾನು ಅನ್ನುವದ್ದನ್ನ ಇಬ್ಬರೂ ಲೆಟ್ ಗೋ ಮಾಡುತ್ತಾ ಬಂದರೆ ಮಾತ್ರ
ಪರಸ್ಪರರೊಳಗೆ ಪರಸ್ಪರರ ಹೆಸರಿನ ಪಸೆಯುಳಿಯಬಲ್ಲುದು. ಹಾಗಂತ ತನ್ನತನವನ್ನು
ಕಳಕೊಳ್ಳಬೇಕಂತಲೇ ಅಲ್ಲ. ತನ್ನತನವನ್ನು ಅವರ ಅಸ್ತಿತ್ವ ಒಳಗೊಳ್ಳಬಲ್ಲ ರೀತಿಯಲ್ಲಿ, ವಿರೂಪವೂ
ಆಗದಂತೆ ಕಡೆದು ಆಕಾರ ಕೊಡುವುದೇ ಇಲ್ಲಿ ಅಗತ್ಯ. ನದಿಯು ಹರಿದು ಸಾಗರದಲ್ಲಿ
ಕರಗಿಹೋಗುವಾಗ ಕಳೆದುಕೊಳ್ಳುವ ತನ್ನ ಸಿಹಿಗೆ ಬದಲಾಗಿ ತಾನೇ ಸಾಗರವಾಗುವ ಪ್ರತಿಫಲವನ್ನು
ಪಡೆದಿರುತ್ತದೆ. ಹೀಗೆ ತಾನಳಿಯದೇ ಆ ಅಸ್ತಿತ್ವದೊಳಗೆ ಸೇರಿಕೊಳ್ಳುವುದಕ್ಕೆ ಭರವಸೆ ಅನ್ನುತ್ತಾರೆ
ನೋಡು. ಓಶೋ ಹೇಳಿದಂತೆ ತುಸು ಅಂತರದಲ್ಲಿರುವ ಆದರೆ ಒಂದಕ್ಕೊಂದು
ಪೂರಕವಾಗಿದ್ದುಕೊಂಡು ನಿಂತಿರುವ ದೇಗುಲದ ಕಂಬಗಳೇ ದೇಗುಲದ ಸೂರನ್ನು ಆಧರಿಸಬಲ್ಲುವು.
ಈಗ ಕಣ್ಮುಚ್ಚಿ ಆ ತೋಟದ ಪರಿಮಳಕ್ಕೆ ಒಡ್ಡಿಕೊಳ್ಳುವುದು, ಅದರ ಸೊಗಸಿಗೆ ವಿಸ್ಮಯಗೊಳ್ಳುವುದು,
ಮತ್ತು ಕಾಲದ ಓಘಕ್ಕೆ ಜೊತೆಯಾಗುತ್ತಾ ಬದುಕಿಬಿಡುವುದು- ಇದು ನಮ್ಮ ಬದುಕಿನ ಹಂತ. ನಮ್ಮ
ಪರಸ್ಪರರೆಡೆಗಿನ ಗಮನ ಪ್ರಯತ್ನಪೂರ್ವಕವಾಗಿ ಈಗ ಅಲ್ಲೇನೂ ಬಿತ್ತಬೇಕಿಲ್ಲ ಮಗಳೇ,
ಯಾಕೆಂದರೆ ನಾವೀಗ ಪರಸ್ಪರರ ಎದುರು ನಿಂತಿಲ್ಲ. ಅವರ ನಾನು ಎಂಬ ಪರಿಧಿಯ ಒಳನಡೆದು

ಅವರ ನನ್ನತನ ಎಂಬುದರ ಭಾಗವಾಗಿದ್ದೇನೆ ನಾನು, ಹಾಗೆಯೇ ಅವರೂ ಕೂಡಾ. ಹಾಗಾಗಿ
ಮಾತು, ಅಭಿವ್ಯಕ್ತಿಗಳಿಗಿಂತ ಹೆಚ್ಚು ನಮ್ಮ ಸಖ್ಯದಲ್ಲಿ ಮೌನ ಮನೆ ಮಾಡಿರುತ್ತದೆ…” ಅಂತ
ಮುಂದುವರೆಸುತ್ತಿದ್ದ ಅಮ್ಮನನ್ನ ಅಲ್ಲೇ ತಡೆದು ಮಗಳು ಹೇಳುತ್ತಾಳೆ…. “ವೆಲ್….. ನೀನು ಹೇಳಿದ್ದು
ಅಷ್ಟರಮಟ್ಟಿಗೆ ಅರ್ಥವಾಗಿ ಒಪ್ಪಿಗೆ ಅಂತಾಗದಿದ್ದರೂ, ನಿಮ್ಮ ನಡುವೆ ಪ್ರೀತಿಯಿದೆ, ಇನ್ನೂ ಚೆಂದವೇ
ಇದೆ ಅನ್ನುವದ್ದು ನಂಗೆ ನಿಮ್ಮಿಬ್ಬರ ಬಗ್ಗೆ ಮಾತಾಡುವಾಗ ನಿನ್ನ ಕಣ್ಣ ಮಿನುಗಿನಲ್ಲಿ, ನಡುನಡುವೆ
ನೀನು ಕಳೆದುಹೋಗುತ್ತಿದ್ದ ಆ ಕ್ಷಣಗಳ ಮೌನದಲ್ಲಿ, ಅಪ್ಪನ ಯೋಚನೆಗೆ ನಿನ್ನ ಮುಖದಲ್ಲಿ ಮೂಡಿದ
ಮೆಲುನಗುವಿನಲ್ಲಿ ಕಂಡಿತು, ಫೀಲಿಂಗ್ ಸೋ ರಿಲೀವ್ಡ್ ಅಮ್ಮ….”

+5

Leave a Reply

Your email address will not be published. Required fields are marked *

error: Content is protected !!